ಮಾವಿನಹಣ್ಣಿನ ರಸಾಯನ

WDWD
ಮಾವಿನ ಸೀಸನ್ನಿನ ವಿಶೇಷ ಭಕ್ಷ್ಯವೆಂದರೆ ಮಾವಿನ ರಸಾಯನ. ಬಹುಶಃ ಮಾವು ಬೆಳೆಯುವ ಪ್ರದೇಶದ ಯಾವುದೇ ಮನೆಗೆ ಮಾವಿನ ಸೀಸನ್ ಸಮಯದಲ್ಲಿ ಭೇಟಿ ನೀಡಿದರೆ ರಸಾಯನ ಸವಿಯಲು ಸಿಗದಿರುವುದು ಅಪರೂಪ. ಅದನ್ನು ಹೇಗೆ ಮಾಡೋದು ಅಂತ ಕೆಲವರ ಪ್ರಶ್ನೆ. ಇದೋ ಇಲ್ಲಿದೆ ಅದನ್ನು ಮಾಡುವ ವಿಧಾನ:

ಬೇಕಾಗುವ ಸಾಮಗ್ರಿ:
ಚೆನ್ನಾಗಿ ಕಳಿತ ಮಾವಿನ ಹಣ್ಣು 1 ಡಜನ್
ಬೆಲ್ಲ 500 ಗ್ರಾಂ. (ಮಾವು ಹುಳಿಯಾಗಿದ್ದರೆ ಹೆಚ್ಚು ಬೇಕಾಗುತ್ತದೆ)
ತೆಂಗಿನ ಕಾಯಿ 2
ಒಂದಿಷ್ಟು ಏಲಕ್ಕಿ ಪುಡಿ (ಇಷ್ಟವಿದ್ದರೆ)

ಪಾಕ ವಿಧಾನ:
ಮಾವಿನ ಹಣ್ಣುಗಳನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆದು ಒಂದು ಪಾತ್ರೆಯಲ್ಲಿ ಹಿಸುಕಿರಿ. ರಸವನ್ನೆಲ್ಲಾ ಚೆನ್ನಾಗಿ ಹಿಂಡಿ. ಗೊರಟು ಕೂಡ ಅದರಲ್ಲೇ ಉಳಿಸಬಹುದು. ನಂತರ ಅದಕ್ಕೆ ಚೆನ್ನಾಗಿ ಪುಡಿ ಮಾಡಿದ ಬಿಳಿ ಬೆಲ್ಲವನ್ನು ಬೆರೆಸಿ. ಅದಕ್ಕೆ ತೆಂಗಿನ ಕಾಯಿಯ ಹಾಲು ಕೂಡ ಸೇರಿಸಿ. ಬೆಲ್ಲದ ತುಣುಕುಗಳು ಸಿಗಲಾರದಂತೆ ಚೆನ್ನಾಗಿ ಕದಡಿ.

WDWD
ಪರಿಮಳ ಸೂಸುವುದಕ್ಕೆ ಬೇಕಿದ್ದರೆ ಒಂದು ಚಿಟಿಕೆ ಏಲಕ್ಕಿ ಪುಡಿ ಬೆರೆಸಿ. ಸ್ವಲ್ಪ ಹೊತ್ತು ಫ್ರಿಜ್‌ನಲ್ಲಿಟ್ಟರೆ ತಂಪಾದ ಮಾವಿನ ರಸಾಯನ ಕುಡಿಯಲು ಸಿದ್ಧ.

ಇದಲ್ಲದೆ, ಅವಲಕ್ಕಿಗೆ ರಸಾಯನ ಮಿಶ್ರ ಮಾಡಿಕೊಂಡು ತಿನ್ನುವುದೆಂದರೆ ಕರಾವಳಿ ತೀರದ ಮನೆಮನೆಗಳಲ್ಲಿ, ಮದುವೆ-ಗೃಹಪ್ರವೇಶ ಮುಂತಾದ ಸಮಾರಂಭಗಳ ಸಂದರ್ಭ ಕಂಡು ಬರುವ ವಿಶೇಷ ಭಕ್ಷ್ಯ.

ಸೂ: ಮಾವಿನ ಹಣ್ಣನ್ನು ಹಿಸುಕಿ ರಸ ಹಿಂಡುವ ಬದಲು, ಸಿಪ್ಪೆ ತೆಗೆದು, ಚಾಕುವಿನಲ್ಲಿ ಅದನ್ನು ಚೆನ್ನಾಗಿ ಸಣ್ಣ ಸಣ್ಣ ತುಂಡುಗಳಾಗಿ ಕೊಚ್ಚಿಯೂ ಹಾಕಬಹುದು.