ಅಭಿಮಾನಿಗಳಿಂದ ನೇರಾನೇರ ಅಪಹಾಸ್ಯಕ್ಕೊಳಗಾದ ಧೋನಿ

ಬುಧವಾರ, 17 ಜೂನ್ 2009 (18:45 IST)
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅನುಸರಿಸಿದ ತಂತ್ರಗಾರಿಕೆಗಳಿಗಾಗಿ ಮಾಜಿ ಕ್ರಿಕೆಟಿಗರುಗಳಿಂದ ಟೀಕೆಯನ್ನೆದುರಿಸಿದ ಮಹೇಂದ್ರ ಸಿಂಗ್ ಧೋನಿ ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಪಂದ್ಯದ ನಂತರ ಆಕ್ರೋಶಿತ ಅಭಿಮಾನಿಗಳಿಂದ ಅಪಹಾಸ್ಯಕ್ಕೊಳಗಾದ ಘಟನೆ ವರದಿಯಾಗಿದೆ.

ಟ್ವೆಂಟಿ-20 ವಿಶ್ವಕಪ್‌ನ ಸೂಪರ್ ಎಂಟರ ತನ್ನ ಕೊನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದೆದುರು 12 ರನ್ನುಗಳಿಂದ ಸೋಲುಂಡಿದ್ದ ಟೀಮ್ ಇಂಡಿಯಾ ಕಪ್ತಾನ ಧೋನಿ ಪಂದ್ಯದ ನಂತರದ ಸಮಾರಂಭದಲ್ಲಿದ್ದಾಗ ತೀವ್ರ ಹೀಯಾಳಿಕೆಗೊಳಗಾಗಿದ್ದರು. ಆದರೆ ಇದೆಲ್ಲ ತನ್ನನ್ನು ಧೃತಿಗೆಡಿಸದು ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

"ನಾನು ಗೇಲಿಗೊಳಗಾಗುತ್ತಿರುವುದು ಇದೇನೂ ಮೊದಲಲ್ಲ. ಈ ಹಿಂದೆ 2007ರಲ್ಲಿ ನ್ಯೂಜಿಲೆಂಡ್ ವಿರುದ್ಧ ವಿಶ್ವಕಪ್‌ನಲ್ಲಿ ಸೋಲುಂಡಾಗ ನನ್ನ ಅಂತಿಮ ಸಂಸ್ಕಾರವನ್ನೂ ಮಾಡಲಾಗಿತ್ತು. ಆದರೆ ನಾನದನ್ನು ಮನಸ್ಸಿಗೆ ತೆಗೆದುಕೊಂಡಿರಲಿಲ್ಲ. ಇದು ಅಭಿಮಾನಿಗಳ ನಿರೀಕ್ಷೆಯ ಮಟ್ಟವನ್ನು ತೋರಿಸುತ್ತದೆ" ಎಂದು ಘಟನೆಯ ಬಗ್ಗೆ ಮಾತನಾಡುತ್ತಾ ಧೋನಿ ತಿಳಿಸಿದ್ದಾರೆ.

ಮತ್ತೂ ಮಾತು ಮುಂದುವರಿಸಿದ ಅವರು, "ನಿನ್ನನ್ನು ಯಾರಾದರೂ ಹೊಗಳಿದರೆ ಆಗ ನೀನು ಸ್ವರ್ಗಕ್ಕೇರಬೇಡ. ಹಾಗಾದಲ್ಲಿ ನೀನು ಎಡವಿದಾಗ ಪರಿಸ್ಥಿತಿ ಉತ್ತಮವಾಗಿರದು. ಅದಕ್ಕಾಗಿ ನೀನು ಮಧ್ಯ ಪಥದಲ್ಲಿ ಸಾಗಲು ಯತ್ನಿಸು ಎಂದು ಕೆಲ ವರ್ಷಗಳ ಹಿಂದೆ ಹಿರಿಯರೊಬ್ಬರು ನನಗೆ ಬುದ್ಧಿ ಹೇಳಿದ್ದರು. ಅದರಂತೆ ನಡೆದುಕೊಳ್ಳಲು ನಾನು ಯತ್ನಿಸುತ್ತಿದ್ದೇನೆ" ಎಂದರು.

ಟ್ವೆಂಟಿ-20 ವಿಶ್ವಕಪ್‌ನಲ್ಲಿ ಸೋಲುಂಡ ಹಿನ್ನಲೆಯಲ್ಲಿ ಟೀಮ್ ಇಂಡಿಯಾ ಮತ್ತು ಧೋನಿಯ ವಿರುದ್ಧ ಪ್ರತಿಭಟನೆಗಳನ್ನು ಮಾಡಿದ್ದಲ್ಲದೆ ಪ್ರತಿಕೃತಿಗಳನ್ನು ಕೂಡ ದೇಶದ ವಿವಿಧೆಡೆ ದಹಿಸಲಾಗಿತ್ತು. ಆ ಮೂಲಕ ಕ್ರಿಕೆಟ್ ಅಭಿಮಾನಿಗಳು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದರು.

2007ರ ವಿಶ್ವಕಪ್‌ನಲ್ಲಿ ಭಾರತ ಸೋಲುಂಡಾಗಲೂ ಇದೇ ರೀತಿಯ ಪರಿಸ್ಥಿತಿ ಎದುರಾಗಿತ್ತು. ಆ ಸಂದರ್ಭದಲ್ಲಿ ಹಲವು ಕ್ರಿಕೆಟಿಗರ ವಿರುದ್ಧ ತೀವ್ರ ಪ್ರತಿಭಟನೆಗಳು ವ್ಯಕ್ತವಾಗಿದ್ದವು. ಧೋನಿಯ ನಿರ್ಮಾಣ ಹಂತದಲ್ಲಿದ್ದ ಮನೆಯ ಹೊರ ಗೋಡೆಯನ್ನು ರಾಂಚಿಯಲ್ಲಿ ಅಭಿಮಾನಿಗಳು ಧ್ವಂಸ ಮಾಡಿದ್ದರು.

ವೆಬ್ದುನಿಯಾವನ್ನು ಓದಿ