ಟ್ವೆಂಟಿ-20 ವಿಶ್ವಕಪ್‌ನಿಂದ ಟೀಮ್ ಇಂಡಿಯಾ ಬೇಗನೆ ಹೊರ ಬಿದ್ದಿರುವುದಕ್ಕೆ ತನಗೂ ನಿರಾಸೆಯಾಗಿದೆ ಎಂದಿರುವ ಸಚಿನ್ ತೆಂಡೂಲ್ಕರ್, ಅಭಿಮಾನಿಗಳು ತಮ್ಮ ವರ್ತನೆಯಲ್ಲಿ ಹೆಚ್ಚು ಜವಾಬ್ದಾರಿ ಮತ್ತು ಸಮತೋಲನ ತೋರಿಸಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.
"ಪ್ರತಿಕ್ರಿಯಿಸುವಾಗ ಜನರಲ್ಲಿ ಭಾವೋದ್ರೇಕವಾಗಿತ್ತು. ಆದರೆ ಇಂತಹ ಪ್ರತಿಕ್ರಿಯೆಗಳಿಂದ ನಾವು ಉತ್ತಮ ಆಟ ತೋರಿಸಲು ಸಾಧ್ಯವಿದೆಯೇ? ನಿಜಕ್ಕೂ ಆಗದು. ಇದರಿಂದ ಆಟಗಾರರ ಮೇಲೆ ಮತ್ತಷ್ಟು ಒತ್ತಡ ಬೀಳುತ್ತದೆ. ನಾವು ಪ್ರಬುದ್ಧತೆ ತೋರಿಸಬೇಕು. ಆ ಮೂಲಕ ತಂಡವನ್ನು ಬೆಂಬಲಿಸಬೇಕು" ಎಂದು ಸಚಿನ್ ತಿಳಿಸಿದ್ದಾರೆ.
PTI
"ಹಿಂದೆ ನಡೆದದ್ದನ್ನು ಯಾರಿಗೂ ಬದಲಾಯಿಸಲು ಸಾಧ್ಯವಿಲ್ಲ. ಆದರೆ ಅದರಿಂದ ಪಾಠ ಕಲಿಯಬಹುದು. ಆ ಮೂಲಕ ಮುಂದೆ ಸುಧಾರಿಸಿಕೊಳ್ಳಬಹುದು. ನನ್ನ ಪ್ರಕಾರ ನಾವು ಯಶಸ್ಸು ಮತ್ತು ವಿಫಲತೆಗಳಿಗೆ ಪ್ರತಿಕ್ರಿಯಿಸುವಾಗ ಜವಾಬ್ದಾರಿಯುತರಾಗಿರಬೇಕು ಮತ್ತು ಸಮತೋಲನವನ್ನು ಕಾಯ್ದುಕೊಳ್ಳಬೇಕು. ಹಾಗೆ ಮಾಡಿದಲ್ಲಿ ಪ್ರತಿಯೊಬ್ಬರಿಗೂ ಇಂತಹ ಪರಿಸ್ಥಿಯನ್ನು ಸ್ವೀಕರಿಸಲು ಸುಲಭವಾಗುತ್ತದೆ" ಎಂದು ಟೀವಿ ವಾಹಿನಿಯೊಂದರ ಜತೆ ಮಾತನಾಡುತ್ತಾ ತನ್ನ ಅನಿಸಿಕೆ ವ್ಯಕ್ತಪಡಿಸಿದರು.
ಭಾರತ ಕ್ರಿಕೆಟ್ ತಂಡವನ್ನು ಹುರಿದುಂಬಿಸಲು ತೆಂಡೂಲ್ಕರ್ ತನ್ನ ಕುಟುಂಬದ ಜತೆ ಲಂಡನ್‌ಗೆ ತೆರಳಿದ್ದರು. ಆದರೆ ಮಹೇಂದ್ರ ಸಿಂಗ್ ಧೋನಿ ಬಳಗವು ಸೂಪರ್ ಎಂಟರ ಯಾವೊಂದು ಪಂದ್ಯಗಳನ್ನು ಗೆಲ್ಲಲಾಗದೆ ಟೂರ್ನಮೆಂಟ್‌ನಿಂದಲೇ ಹೊರ ಬಿದ್ದಿತ್ತು. ಈ ಹಿನ್ನಲೆಯಲ್ಲಿ ಧೋನಿಯ ನಾಯಕತ್ವವನ್ನೇ ಅಭಿಮಾನಿಗಳು ಪ್ರಶ್ನಿಸಿ ತೀವ್ರ ಟೀಕೆಗೂ ಗುರಿಪಡಿಸಿದ್ದರು. ಅಲ್ಲದೆ ತಂಡದ ಆಯ್ಕೆ ಬಗೆಗೂ ಕೋಲಾಹಲಗಳೆದ್ದಿದ್ದವು.
ಸೋಲಿನ ಬೆನ್ನಿಗೆ ಧೋನಿ ದೇಶದ ಕ್ಷಮೆ ಯಾಚಿಸಿದರೂ ಅಭಿಮಾನಿಗಳನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ತವರು ನಗರ ರಾಂಚಿಯಲ್ಲೇ ಆಕ್ರೋಶಿತರು ಧೋನಿಯ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದ್ದರು.
ಕ್ರೀಡಾಭಿಮಾನಿಗಳ ಭಾವನೆಗಳು ತನಗೆ ಅರ್ಥವಾಗುತ್ತಿವೆ ಎಂದಿರುವ ಸಚಿನ್ ಪ್ರಕಾರ ಇದರಲ್ಲಿ ತಂಡ ಯಾವ ತಪ್ಪನ್ನೂ ಮಾಡಿಲ್ಲ. ಅವರು ಗೆಲುವಿಗಾಗಿ ಸಾಕಷ್ಟು ಯತ್ನಿಸಿದ್ದಾರೆ.
"ದೇಶದೊಂದಿಗೆ ನಾನು ಕೂಡ ನಿರಾಸೆಗೊಳಗಾಗಿದ್ದೇನೆ. ಅವರು ಅತ್ಯುತ್ತಮ ಯೋಜನೆಗಳನ್ನು ರೂಪಿಸಿ ಕಠಿಣ ಶ್ರಮವಹಿಸಿದ್ದರು ಎಂಬ ಬಗ್ಗೆ ಯಾವುದೇ ಸಂಶಯಗಳಿಲ್ಲ. ಆದರೆ ಕೆಲವು ಸಂದರ್ಭದಲ್ಲಿ ಎಲ್ಲವೂ ನಾವಂದುಕೊಂಡಂತೆ ನಡೆಯುವುದಿಲ್ಲ" ಎಂದರು.
"ಅಲ್ಲೀಗ ನಿರಾಸೆಯೇ ತುಂಬಿಕೊಂಡಿರಬಹುದು. ಆದರೆ ತಂಡವು ಮುಂದಿನ ದಿನಗಳಲ್ಲಿ ತನ್ನ ಲಯವನ್ನು ಮರಳಿ ಕಂಡುಕೊಳ್ಳಲಿದೆ. ದೇಶದ ಜನ ಅವರ ಬೆಂಬಲಕ್ಕೆ ನಿಂತರೆ ಖಂಡಿತ ಟೀಮ್ ಇಂಡಿಯಾ ಅಸಾಧಾರಣ ತಂಡವೆನಿಸಲಿದೆ" ಎಂದು ಸಚಿನ್ ತಿಳಿಸಿದ್ದಾರೆ.