ಆತಿಥೇಯ ಇಂಗ್ಲೆಂಡ್ ವಿಶ್ವಕಪ್‌ನಿಂದ ಔಟ್: ವಿಂಡೀಸ್ ಸೆಮಿಗೆ
ಮಂಗಳವಾರ, 16 ಜೂನ್ 2009 (09:27 IST)
ಐಸಿಸಿ ಟೆಂಟಿ-20 ವಿಶ್ವಕಪ್ ಕ್ರಿಕೆಟ್‌ನ ಸೋಮವಾರ ನಡೆದ ನಿರ್ಣಾಯಕ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು ಡಕ್ ವರ್ತ್ ಲೂವಿಸ್ ನಿಯಮದಡಿ ವೆಸ್ಟ್‌ಇಂಡೀಸ್ ಐದು ವಿಕೆಟ್‌ಗಳಿಂದ ಮಣಿಸಿದೆ. ಮಳೆ ಅಡಚಣೆಪಡಿಸಿದ ಪಂದ್ಯದಲ್ಲಿ ವಿಂಡೀಸ್‌ಗೆ ಗೆಲ್ಲಲು 9 ಓವರ್‌ನಲ್ಲಿ 80ರನ್ ನಿಗದಿಪಡಿಸಲಾಗಿತ್ತು. ಇದನ್ನು ಐದು ವಿಕೆಟ್ ನಷ್ಟದಲ್ಲೇ ವಿಂಡೀಸ್ ಗುರಿ ತಲುಪಿತು.
ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಪಾಲ್ ಕಾಲಿಂಗ್‌ವುಡ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದರು. ಆದರೆ ಎರಡನೇ ಓವರ್‌ನಲ್ಲಿ ಆರಂಭಿಕ ರೈಟ್(6), ನಿರಾಸೆ ಮೂಡಿಸಿದರು. ನಂತರ ಬಂದ ಕೆವಿನ್ ಪೀಟರ್‌ಸನ್ ಆಕ್ರಮಣಕಾರಿಯಾಗಿ ಆಡಿ 19 ಎಸೆತಗಳಲ್ಲಿ 31ರನ್ ಗಳಿಸಿದ್ದರಲ್ಲದೆ ಎರಡನೇ ವಿಕೆಟ್‌ಗೆ ರವಿ ಬೋಪಾರಾ ಜತೆ ಸೇರಿ 56ರನ್ ಒಟ್ಟುಗೂಡಿಸಿದರು.
ಓವೈ ಶಾ ಸಹ ಬೋಪಾರಾಗೆ ಉತ್ತಮ ಬೆಂಬಲ ನೀಡಿ 18ರನ್ ಗಳಿಸಿ ಬ್ರಾವೋ ಎಸೆತಕ್ಕೆ ಬಲಿಯಾದರು. ನಾಯಕ ಕಾಲಿಂಗ್‌ವುಡ್(11), ಫೋಸ್ಟರ್(13)ರನ್ ಗಳಿಸಿದರೆ ಸ್ವಾನ್ ಹಾಗೂ ಸ್ಟುವರ್ಟ್ ಬ್ರಾಡ್ ತಲಾ 10ರನ್ ಗಳಿಸಿ ಅಜೇಯರಾಗುಳಿದರು.
ಆರಂಭಿಕ ಆಟಗಾರ ರವಿ ಬೋಪಾರಾ 47 ಎಸತಗಳಲ್ಲಿ 55ರನ್ ಗಳಿಸಿ ತಂಡದ ಮೊತ್ತ 160ರನ್ ದಾಟುವಲ್ಲಿ ಪ್ರಮುಖ ಪಾತ್ರವಹಿಸಿದರು. ಕೊನೆಗೆ ಇಂಗ್ಲೆಂಡ್ ನಿಗದಿತ 20 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 161ರನ್ ಗಳಿಸಿತು. ವಿಂಡೀಸ್ ಪರ ಬ್ರಾವೋ 2, ಸಿಮನ್ಸ್, ಗೈಲ್, ಬೆನ್, ಪೋಲಾರ್ಡ್ ತಲಾ ಒಂದೊಂದು ವಿಕೆಟ್ ಕಿತ್ತರು.
ಈ ಹಂತದಲ್ಲಿ ಪಂದ್ಯಕ್ಕೆ ಮಳೆಯ ಅಡಚಣೆಯುಂಟಾದ ಪರಿಣಾಮ ಡಕ್ ವರ್ತ್ ಲೂವಿಸ್ ನಿಯಮದಡಿ ವಿಂಡೀಸ್‌ಗೆ ಗೆಲ್ಲಲು 9 ಓವರ್‌ಗಳಲ್ಲಿ 80ರನ್ ನಿಗದಿಪಡಿಸಲಾಯಿತು.
ಆದರೆ ವಿಂಡೀಸ್ ಆರಂಭ ಬಹಳ ಕೆಟ್ಟದಾಗಿತ್ತು. ಕಪ್ತಾನ ಗೈಲ್ 15 ಹಾಗೂ ಫ್ಲೆಚರ್ ಹಾಗೂ ಸಿಮನ್ಸ್ ಶೂನ್ಯಕ್ಕೆ ಬಲಿಯಾದರು. ನಂತರ ಬಂದ ಬ್ರಾವೋ 18 ಮತ್ತು ಪೋಲಾರ್ಡ್ ಸಹ 9 ರನ್ ಗಳಿಸಿ ಬೇಗನೇ ವಿಕೆಟ್ ಒಪ್ಪಿಸಿದರು. ಬಿಗು ದಾಳಿ ಸಂಘಟಿಸಿದ ಇಂಗ್ಲೆಂಡ್ ಬೌಲರ್‌ಗಳು ಪಂದ್ಯದಲ್ಲಿ ಪೂರ್ಣ ಹಿಡಿತವನ್ನು ಸಾಧಿಸಿದರು.
ಒಂದು ಹಂತದಲ್ಲಿ ವಿಂಡೀಸ್ 6ನೇ ಓವರ್‌ನಲ್ಲಿ 45ರನ್‌ಗೆ ಐದು ವಿಕೆಟ್ ಕಳಕೊಂಡು ಸಂಕಷ್ಟದ ಪರಿಸ್ಥಿತಿಯಲ್ಲಿತ್ತು. ಈ ಹಂತದಲ್ಲಿ ಒಂದುಗೂಡಿದ ಅನುಭವಿ ಆಟಗಾರ ರಾಮ್‌ನರೇಶ್ ಸರ್ವಾನ್ ಹಾಗೂ ಶಿವನಾರಯಣ್ ಚಂದ್ರಪಾಲ್ ಸೇರಿ ಆರನೇ ವಿಕೆಟ್‌ಗೆ ಮುರಿಯದ 37ರನ್ ಒಟ್ಟುಗೂಡಿಸಿ ತಂಡಕ್ಕೆ ಅಮೂಲ್ಯ ಜಯವನ್ನು ತಂದೊದಗಿಸಿದರು.
9 ಎಸೆತಗಳಲ್ಲಿ ಮೂರು ಬೌಂಡರಿ ನೆರವಿನಿಂದ ಅಜೇಯ 19ರನ್ ಗಳಿಸಿದ ಸರ್ವಾನ್ ಹಾಗೂ 10 ಎಸೆತಗಳನ್ನು ಎದುರಿಸಿ ಒಂದು ಬೌಂಡರಿ ನೆರವಿನೊಂದಿಗೆ ಅಜೇಯ 17ರನ್ ಗಳಿಸಿದ ಚಂದ್ರಪಾಲ್ ವಿಂಡೀಸ್ ಗೆಲುವಿನ ಪ್ರಮುಖ ರೂವಾರಿಯಾದರು. ರಾಮ್ ನರೇಶ್ ಸರ್ವಾನ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.
ಆತಿಥೇಯ ಇಂಗ್ಲೆಂಡ್ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಸೋತು ತಾಯ್ನಾಡಿನ ಪ್ರೇಕ್ಷಕರಿಗೆ ನಿರಾಸೆಯನ್ನುಂಟು ಮಾಡಿದರು. ಇನ್ನೊಂದೆಡೆ ವರುಣನ ಕೃಪೆಯಿಂದ ವಿಂಡೀಸ್ ಸೆಮಿಗೆ ಪ್ರವೇಶಿಸಿ ಅಚ್ಚರಿಯನ್ನುಂಟು ಮಾಡಿದೆ.