ಲೀಗ್ ಹಂತದಲ್ಲಿ ಸತತ ಎರಡು ಜಯ ದಾಖಲಿಸಿರುವ ಭಾರತವು ಇದುವರೆಗೆ ಸೋಲೇ ಕಾಣದ ನ್ಯೂಜಿಲೆಂಡ್ ತಂಡವನ್ನು ಗುರುವಾರ ನಡೆಯಲಿರುವ ಟ್ವೆಂಟಿ-20 ಮಹಿಳಾ ವಿಶ್ವಕಪ್ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಎದುರಿಸಲಿದೆ.
ಆರಂಭಿಕ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಪರದಾಡಿ ಸೋಲುಂಡಿದ್ದ ಭಾರತೀಯ ವನಿತೆಯರು ನಂತರದ ಎರಡು ಪಂದ್ಯಗಳಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾಗಳನ್ನು ಮಣಿಸುವ ಮೂಲಕ ಫೈನಲ್ ಸುತ್ತಿಗಾಗಿ ಹೋರಾಡುವ ಅವಕಾಶ ಗಿಟ್ಟಿಸಿಕೊಂಡಿದ್ದರು. ಪ್ರಬಲ ನ್ಯೂಜಿಲೆಂಡ್ ತಂಡವನ್ನು ಪರಾಜಯಗೊಳಿಸುವ ವಿಶ್ವಾಸ ನಾಯಕಿ ಜೂಲನ್ ಗೋಸ್ವಾಮಿ ಮತ್ತು ಸದಸ್ಯರದ್ದು.
ಭಾರತದ ಆರಂಭಿಕ ಜೋಡಿ ಪೂನಮ್ ರಾವುತ್ ಮತ್ತು ಅಂಜುಮ್ ಛೋಪ್ರಾ ಅದ್ಭುತ ಆರಂಭವನ್ನೇನೂ ಈ ಟೂರ್ನಮೆಂಟ್‌ನಲ್ಲಿ ಮಾಡಿರಲಿಲ್ಲ. ಅಂಜುಮ್ ಕೆಲವೊಂದು ಉತ್ತಮ ಹೊಡೆತಗಳಿಂದ ಗಟ್ಟಿಯಾಗಿ ನಿಲ್ಲಲು ಯತ್ನಿಸಿದ್ದರೆ, ರಾವುತ್ ಇಂಗ್ಲೆಂಡ್ ವಿರುದ್ಧ ಕೇವಲ ನಾಲ್ಕು ರನ್ ಮಾತ್ರ ಗಳಿಸಿದ್ದರು.
ಆದರೆ ಈ ಎಡಗೈ ಆಟಗಾರ್ತಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 41 ಎಸೆತಗಳಿಂದ 30 ರನ್ ದಾಖಲಿಸುವ ಮೂಲಕ ಆತ್ಮವಿಶಾಸವನ್ನು ಮರಳಿ ಗಿಟ್ಟಿಸಿಕೊಂಡಿದ್ದು, ಆ ಪಂದ್ಯವನ್ನು ಭಾರತಕ್ಕೆ ಗೆಲ್ಲಿಸಿಕೊಡುವಲ್ಲಿ ಪ್ರಮುಖ ಅಸ್ತ್ರವಾಗಿದ್ದರು.
ಮಧ್ಯಮ ಕ್ರಮಾಂಕ ಕೂಡ ಅತ್ಯುತ್ತಮ ಎನ್ನುವಂತಿಲ್ಲ. ಒತ್ತಡದ ಪರಿಸ್ಥಿತಿಯಲ್ಲಿ ಕೊಸರಾಡುವ ಬ್ಯಾಟಿಂಗ್ ಪಡೆಯು ಕೊನೆಯ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲೂ ಅದನ್ನೇ ಮಾಡಿತ್ತು. ಆ ಪಂದ್ಯದಲ್ಲಿ 22 ಎಸೆತಗಳಿಂದ 32 ರನ್ ಗಳಿಸಿದ್ದ ಮಿಥಾಲಿ ರಾಜ್‌ಗೂ ಮೊದಲು ಮಧ್ಯಮ ಕ್ರಮಾಂಕ ಪಟಪಟನೆ ಕುಸಿದು ಪೆವಿಲಿಯನ್‌ಗೆ ನಡೆದಿತ್ತು.
ಬೌಲಿಂಗ್ ವಿಭಾಗದಲ್ಲಿ ವೇಗ ಮತ್ತು ಸ್ಪಿನ್‌ನಲ್ಲಿ ರುಮೇಲಿ ಧಾರ್ ಮತ್ತು ಪ್ರಿಯಾಂಕಾ ರಾಯ್ ಭಾರತಕ್ಕೆ ಪ್ರಮುಖ ವಿಕೆಟುಗಳನ್ನು ಕೀಳುವ ಮೂಲಕ ಮುನ್ನಡೆ ಒದಗಿಸಿದ್ದಾರೆ. ಇಬ್ಬರೂ ತಲಾ ಐದು ವಿಕೆಟುಗಳನ್ನು ಈ ಟೂರ್ನಮೆಂಟ್‌ನಲ್ಲಿ ಪಡೆದಿದ್ದಾರೆ.
ಅದೇ ಹೊತ್ತಿಗೆ ನಾಯಕಿಯಾಗಿರುವ ಜೂಲನ್ ಗೋಸ್ವಾಮಿ ಸ್ವತಃ ಬಲಗೈ ವೇಗಿಯಾಗಿದ್ದರೂ ಎದುರಾಳಿ ತಂಡದ ಮೇಲೆ ಪ್ರಭಾವ ಬೀರಲು ವಿಫಲರಾಗಿದ್ದಾರೆ.
ಆದರೆ ಸ್ಪಿನ್ನರ್ ಗೌಹಾರ್ ಸುಲ್ತಾನ ಅಗತ್ಯ ಸಂದರ್ಭಗಳಲ್ಲಿ ವಿಕೆಟ್ ಪಡೆಯುವ ಮೂಲಕ ತಂಡಕ್ಕೆ ಉಸಿರು ನೀಡಿದ್ದಾರೆ. ಗುರುವಾರದ ಪಂದ್ಯದಲ್ಲೂ ಅವರ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.
ಅತ್ತ ನ್ಯೂಜಿಲೆಂಡ್ ಇದುವರೆಗೆ ಲೀಗ್‌ನಲ್ಲಿ ಆಡಿರುವ ಆಸ್ಟ್ರೇಲಿಯಾ, ವೆಸ್ಟ್‌ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದುಕೊಂಡು ಅಜೇಯವೆನಿಸಿ ಸೆಮಿಫೈನಲ್ ಪ್ರವೇಶಿಸಿದೆ.
ಅವರ ಬ್ಯಾಟಿಂಗ್ ಪಡೆಯೂ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಿದೆ. ಆರಂಭಿಕ ಆಟಗಾರ್ತಿಯರಾದ ಸೂಜಿ ಬೇಟ್ಸ್ ಮತ್ತು ಲೂಸಿ ದೂಲನ್ ಉತ್ತಮ ಲಯ ಹೊಂದಿದ್ದಾರೆ. ಒಟ್ಟಾರೆ ತಂಡವು ಬೃಹತ್ ಮೊತ್ತ ಪೇರಿಸುವ ಸಾಮರ್ಥ್ಯವನ್ನು ಹೊಂದಿದೆ.
ಭಾರತವು ನ್ಯೂಜಿಲೆಂಡ್ ತಂಡವನ್ನು ಸಮರ್ಥವಾಗಿ ಎದುರಿಸಿ ಪುರುಷರ ತಂಡ ಈ ಬಾರಿ ಮಾಡಲಾಗದ ಸಾಧನೆಯನ್ನು ವಿಶ್ವಕಪ್ ಫೈನಲ್ ತಲುಪುವ ಮೂಲಕ ಮಾಡುವುದೇ ಎಂಬುದನ್ನು ಕಾದು ನೋಡಬೇಕಾಗಿದೆ.