ನಮ್ಮನ್ನು 'ಚೋಕರ್ಸ್' ಎಂದ್ಯಾಕೆ ಕರೆಯುತ್ತೀರಿ: ಸ್ಮಿತ್ ಪ್ರಶ್ನೆ

ಶುಕ್ರವಾರ, 19 ಜೂನ್ 2009 (16:05 IST)
ತನ್ನ ತಂಡವನ್ನು 'ಚೋಕರ್ಸ್' ಎಂದು ಬ್ರಾಂಡ್ ಮಾಡುತ್ತಿರುವುದಕ್ಕೆ ದಕ್ಷಿಣ ಆಫ್ರಿಕಾ ಕಪ್ತಾನ ಗ್ರೇಮ್ ಸ್ಮಿತ್ ಟ್ವೆಂಟಿ-20 ವಿಶ್ವಕಪ್ ಫೈನಲ್ ತಲುಪಲು ಸಾಧ್ಯವಾಗದಿರುವ ಹೊರತಾಗಿಯೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಟೂರ್ನಮೆಂಟ್‌ನಲ್ಲಿ ಸತತ ಐದು ಜಯಗಳನ್ನು ದಾಖಲಿಸಿದ್ದ ದಕ್ಷಿಣ ಆಫ್ರಿಕಾ ಗೆಲ್ಲುವ ನೆಚ್ಚಿನ ತಂಡವೆಂದು ಗುರುತಿಸಿಕೊಂಡಿದ್ದರೂ ಸೆಮಿಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ ಏಳು ವಿಕೆಟುಗಳ ಅಂತರದಿಂದ ಸೋಲುಂಡು ವಿಶ್ವಕಪ್‌ನಿಂದ ನಿರ್ಗಮಿಸಿತ್ತು.

ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಶಾಹಿದ್ ಆಫ್ರಿದಿ 34 ಎಸೆತಗಳಿಂದ 51 ರನ್ ಹಾಗೂ 16ಕ್ಕೆ ಎರಡು ಅಮೂಲ್ಯ ವಿಕೆಟುಗಳನ್ನು ಪಡೆಯುವ ಮೂಲಕ ಪಂದ್ಯವನ್ನು ಗೆಲ್ಲಿಸಿದ್ದರು. ಪಾಕಿಸ್ತಾನವು ನಾಲ್ಕು ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿದ್ದರೆ, ಹರಿಣಗಳು ಐದು ವಿಕೆಟ್ ನಷ್ಟಕ್ಕೆ 142 ಮಾಡಲಷ್ಟೇ ಶಕ್ತವಾಗಿತ್ತು.

"ಪ್ರತೀ ಬಾರಿಯೂ ಪ್ರಮುಖ ಪಂದ್ಯ ಕಳೆದುಕೊಂಡಾಗ 'ಚೋಕರ್ಸ್' (ಒತ್ತಡದಲ್ಲಿ ಏನೂ ಮಾಡಲಾಗದವರು) ಎಂಬ ಶಬ್ದವನ್ನು ನಮ್ಮ ಮೇಲೆ ಪ್ರಯೋಗಿಸಲಾಗುತ್ತದೆ" ಎಂದು ಪಂದ್ಯದ ನಂತರ ಮಾತನಾಡುತ್ತಾ ಸ್ಮಿತ್ ಅಸಮಾಧಾನ ವ್ಯಕ್ತಪಡಿಸಿದರು.

"ಆದರೆ ನಾವು ಶ್ರೇಷ್ಠ ಆಟವನ್ನೇ ಆಡಿದ್ದೇವೆ. ನಮ್ಮ ಹುಡುಗರು ಈ ಹಾದಿಯಲ್ಲಿ ನೀಡಿದ ನಿರ್ವಹಣೆ ಬಗ್ಗೆ ನನಗೆ ಹೆಮ್ಮೆಯಿದೆ. ಕಳೆದ ಕೆಲವು ವರ್ಷಗಳಿಂದ ನಮ್ಮ ತಂಡವು ಉನ್ನತಿಯತ್ತ ಸಾಗುತ್ತಿದ್ದು, ಸುಧಾರಿಸುತ್ತಿದೆ ಮತ್ತು ಪ್ರಬಲವಾಗುತ್ತಿದೆ" ಎಂದಿದ್ದಾರೆ.

ದಕ್ಷಿಣ ಆಫ್ರಿಕಾವು ಪ್ರಮುಖ ಬಹುರಾಷ್ಟ್ರಗಳ ನಡುವಿನ ಟೂರ್ನಮೆಂಟ್‌ಗಳಾದ ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಗಳಲ್ಲಿ ಬಹುತೇಕ ಪ್ರಮುಖ ಪಂದ್ಯಗಳನ್ನು ಸೋತು ಹೊರಬಿದ್ದ ಇತಿಹಾಸವನ್ನೇ ಹೊಂದಿದೆ.

ಸೆಮಿಫೈನಲ್ ಸೋತಿದ್ದರಿಂದ ನೋವಾಗಿದೆ, ಆದರೆ ಗೆದ್ದ ಪಾಕಿಸ್ತಾನ ತಂಡವು ಅತ್ಯುತ್ತಮ ಮತ್ತು ಗೆಲುವಿಗೆ ಅರ್ಹವಾಗಿತ್ತು ಎಂದಿದ್ದಾರೆ.

"ನಿಸ್ಸಂಶಯವಾಗಿಯೂ ನಮಗಿದು ನಿರಾಸೆ ತಂದಿದೆ. ಟೂರ್ನಮೆಂಟ್‌ನಿಂದ ಈಗಲೇ ನಿರ್ಗಮಿಸುತ್ತಿರುವುದು ದುಃಖದ ವಿಚಾರ. ಈ ಟೂರ್ನಮೆಂಟ್‌ನಲ್ಲಿ ನಾವು ಕೆಲವು ಶ್ರೇಷ್ಠ ಪ್ರದರ್ಶನವನ್ನು ನೀಡಿದ್ದೇವೆ. ಸೆಮಿಫೈನಲ್‌ನಲ್ಲೂ ಅದನ್ನೇ ಮಾಡಿದೆವು" ಎಂದು ತನ್ನ ನಿರಾಸೆಯನ್ನು ತೋಡಿಕೊಂಡರು.

ಮತ್ತೆ ಮಾತು ಮುಂದುವರಿಸಿದ ಸ್ಮಿತ್, "ಆದರೆ ಪಾಕಿಸ್ತಾನವು ತನ್ನ ಉತ್ಕೃಷ್ಟ ಆಟವನ್ನು ನೀಡಿತು. ಪ್ರತಿ ತಂತ್ರಗಳೂ ಅವರಿಗೆ ಸಹಕಾರಿಯಾದವು. ಅದರಲ್ಲೂ ಆಫ್ರಿದಿ ಎಲ್ಲವನ್ನೂ ಮೀರಿ ನಿಂತರು. ಅವರ ನಾಲ್ಕು ಓವರುಗಳು ಪಾಕಿಸ್ತಾನವನ್ನು ಮೇಲಕ್ಕೆತ್ತರಿಸಿದ್ದವು. ನಂತರ ನಮಗೆ ನಮ್ಮನ್ನು ಕಂಡುಕೊಳ್ಳಲು ಸಾಧ್ಯವಾಗಲೇ ಇಲ್ಲ" ಎಂದಿದ್ದಾರೆ.

"ಟೂರ್ನಮೆಂಟ್‌ವುದ್ದಕ್ಕೂ ನಾವು ನೀಡಿದ ಪ್ರದರ್ಶನಗಳ ಪ್ರಕಾರ ನಾವು ಫೈನಲ್ ತಲುಪಲು ಸೂಕ್ತ ತಂಡವಾಗಿದ್ದೆವು. ಆದರೆ ಅದೆಲ್ಲವೂ ಇಲ್ಲಿ ಕೆಲಸ ಮಾಡಲಿಲ್ಲ. ಪಾಕಿಸ್ತಾನವು ನಮಗಿಂತಲೂ ಉತ್ತಮ ಆಟವನ್ನು ನೀಡಿತು" ಎಂದು ಸೋಲನ್ನು ಅರಗಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ