ಭಾರತೀಯ ವನಿತೆಯರು ಟ್ವೆಂಟಿ-20 ವಿಶ್ವಕಪ್ ಸೆಮಿಫೈನಲ್‌ಗೆ

ಮಂಗಳವಾರ, 16 ಜೂನ್ 2009 (11:34 IST)
ಸ್ಥಿರ ಆಟ ಪ್ರದರ್ಶಿಸಿದ ಮಿಥಾಲಿ ರಾಜ್ ಅಜೇಯ 32 ರನ್ನುಗಳೊಂದಿಗೆ ಭಾರತೀಯ ವನಿತೆಯರ ತಂಡ ಶ್ರೀಲಂಕಾವನ್ನು ಐದು ವಿಕೆಟುಗಳಿಂದ ಮಣಿಸಿದ್ದು, ಐಸಿಸಿ ಮಹಿಳೆಯರ ಟ್ವೆಂಟಿ-20 ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಿದೆ.

'ಬಿ' ಗುಂಪಿನ ಈ ಪಂದ್ಯದಲ್ಲಿ ಶ್ರೀಲಂಕಾವನ್ನು 94ಕ್ಕೆ ಆಲೌಟ್ ಮಾಡಿದ್ದ ಭಾರತ ಐದು ವಿಕೆಟ್ ನಷ್ಟಕ್ಕೆ ಇನ್ನೂ ಏಳು ಎಸೆತಗಳು ಬಾಕಿ ಉಳಿದಿರುವಾಗಲೇ ಜಯ ದಾಖಲಿಸಿತು.

95ರ ಗುರಿಯನ್ನು ಬೆಂಬತ್ತಲು ಹೊರಟಿದ್ದ ಭಾರತಕ್ಕೆ ಆರಂಭಿಕ ಆಟಗಾರ್ತಿ ಪೂನಮ್ ರಾವುತ್ ಅಮೂಲ್ಯ 30 ರನ್‌ಗಳನ್ನು ನೀಡಿದ್ದರು. ಈ ಭದ್ರ ಅಡಿಪಾಯದೊಂದಿಗೆ ಹೊರಟ ಭಾರತಕ್ಕೆ ನಂತರ ಸಹಾಯವಾದದ್ದು ಮಿಥಾಲಿ ರಾಜ್.

ಅದಕ್ಕೂ ಮೊದಲು ವೇಗದ ಬೌಲರ್ ರುಮೇಲಿ ಧಾರ್ ಎರಡು ಅಗ್ರ ವಿಕೆಟುಗಳನ್ನು ಪಡೆಯುವ ಮೂಲಕ ದ್ವೀಪ ರಾಷ್ಟ್ರದ ಕುಸಿತಕ್ಕೆ ಕಾರಣರಾಗಿದ್ದರು. ಎಡಗೈ ಸ್ಪಿನ್ನರ್ ಗೌಹಾರ್ ಸುಲ್ತಾನ ಕೂಡ ಎರಡು ವಿಕೆಟ್ ಪಡೆಯುವುದರೊಂದಿಗ ಭಾರತವು ಶ್ರೀಲಂಕಾವನ್ನು 94ಕ್ಕೆ ನಿಯಂತ್ರಿಸಿತ್ತು. ಮಳೆ ಬಂದ ಕಾರಣ ಪಂದ್ಯದಲ್ಲಿ ಎರಡು ಓವರುಗಳನ್ನು ಕಡಿತಗೊಳಿಸಲಾಗಿತ್ತು.

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ್ದ ಲಂಕಾ ತನ್ನರ್ಧ ಪಡೆಯನ್ನು 13 ಓವರುಗಳಲ್ಲೇ ಕಳೆದುಕೊಂಡಿತ್ತು. ಆದರೂ ದೀಪಿಕಾ ರಸಂಗಿಕಾ ಜವಾಬ್ದಾರಿಯುತ ಆಟವಾಡುವ ಮೂಲಕ 20 ಎಸೆತಗಳಿಂದ 24 ರನ್ ಮಾಡಿದ್ದು ಸಾಧಾರಣ ಮೊತ್ತಕ್ಕೆ ಲಂಕಾ ತಲುಪಲು ಸಹಕರಿಸಿದರು.

ರುಮೇಲಿ ಧಾರ್‌ರವರು ಎರಡು ನಿರ್ಣಾಯಕ ವಿಕೆಟುಗಳಾದ ಇನೋಕಾ ಗಲಗೇಧರ (6) ಮತ್ತು ಹಿರುಕಾ ಫೆರ್ನಾಂಡೋರನ್ನು (2) ಕೇವಲ ನಾಲ್ಕು ರನ್‌ಗಳಿಗೆ ಕಿತ್ತಿದ್ದರು. ಇದರ ಬೆನ್ನಿಗೆ ನಾಯಕಿ ಚಾಮರಿ ಪೊಲ್ಗಾಂಪೋಲಾರನ್ನು (2) ವೇಗಿ ಅಮಿತ್ ಶರ್ಮಾ ಪೆವಿಲಿಯನ್‌ಗೆ ಕಳುಹಿಸಿದ್ದರು.

ಚಾಮರಿ ಅಟಪಟ್ಟು (16) ಮತ್ತು ದಿಲಾನಿ ಮನೋದರಾ (17) ತಾಯ್ನಾಡಿಗೆ ಗೆಲುವು ಪಡೆಯುವಂತಹ ಮೊತ್ತ ದಾಖಲಿಸಲು ಯತ್ನಿಸಿದರಾದರೂ ಬಹಳ ಹೊತ್ತು ನಡೆಯಲಿಲ್ಲ. ಇಶಾನಿ ಕೌಶಲ್ಯ (7) ಕೂಡ ಬೇಗನೆ ಹೊರಟು ಹೋದರು.

ಭಾರತದ ಪರ ಅಂಜುಮ್ ಛೋಪ್ರಾ 11, ಸುಲಕ್ಷಣಾ ನಾಯ್ಕ್ 2, ರುಮೇಲಿ ಧಾರ್ 0, ರೀಮಾ ಮಲ್ಹೋತ್ರಾ 12, ಅಮಿತಾ ಶರ್ಮಾ ಅಜೇಯ 5 ರನ್ ದಾಖಲಿಸಿದ್ದರು. ಮಿಥಾಲಿ ರಾಜ್‌ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿದೆ.

ವೆಬ್ದುನಿಯಾವನ್ನು ಓದಿ