ವಿಶ್ವಕಪ್ ನಿರ್ಗಮನಕ್ಕೆ ಧೋನಿಯನ್ನೇ ದೂಷಿಸಿದ ಶ್ರೀನಾಥ್

ಮಂಗಳವಾರ, 16 ಜೂನ್ 2009 (13:38 IST)
ನಾಯಕ ಮಹೇಂದ್ರ ಸಿಂಗ್ ಧೋನಿ ಮಾಧ್ಯಮಗಳನ್ನು ನಿಭಾಯಿಸಿದ ರೀತಿಯ ಕಾರಣದಿಂದಲೇ ಟ್ವೆಂಟಿ-20 ವಿಶ್ವಕಪ್‌ನಿಂದ ಹಾಲಿ ಚಾಂಪಿಯನ್ ಬೇಗನೆ ಹೊರ ಬೀಳುವಂತಾಯಿತು ಎಂದು ಭಾರತದ ಮಾಜಿ ವೇಗಿ ಜಾವಗಲ್ ಶ್ರೀನಾಥ್ ಆರೋಪಿಸಿದ್ದಾರೆ.

ವೀರೇಂದ್ರ ಸೆಹ್ವಾಗ್‌ ಗಾಯಾಳುವಾದ ವಿಚಾರದಲ್ಲಿ ಉಂಟಾಗಿದ್ದ ವಿವಾದವನ್ನು ಮಾಧ್ಯಮಗಳೊಂದಿಗೆ ಧೋನಿ ಸರಿಯಾಗಿ ನಿಭಾಯಿಸಲಿಲ್ಲ; ಇದೇ ಕಾರಣದಿಂದಾಗಿ ತಂಡವು ಗೊಂದಲದಲ್ಲಿ ಬಿದ್ದಿತ್ತು ಎನ್ನುವುದು ಪ್ರಸಕ್ತ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಮ್ಯಾಚ್ ರೆಫ್ರಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀನಾಥ್ ಅಭಿಪ್ರಾಯ.

ಸೆಹ್ವಾಗ್ ವಿಶ್ವಕಪ್ ತಂಡಕ್ಕೆ ಸೇರ್ಪಡೆಯಾಗಿದ್ದರೂ ಭುಜ ನೋವಿನ ಗಾಯಕ್ಕೊಳಗಾಗಿದ್ದ ಕಾರಣ ಯಾವುದೇ ಪಂದ್ಯಗಳನ್ನು ಆಡಿರಲಿಲ್ಲ. ಇದು ಧೋನಿ ಮತ್ತು ಸೆಹ್ವಾಗ್ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬ ಸಂದೇಶವನ್ನು ಹೊರ ಹಾಕುವ ಮೂಲಕ ಮಾಧ್ಯಮಗಳು ಬೆಳಕು ಚೆಲ್ಲಿದ್ದವು.

"ನನ್ನ ಪ್ರಕಾರ ಧೋನಿ ಮತ್ತು ಮಾಧ್ಯಮಗಳ ನಡುವಿನ ವಿವಾದ ಅನಗತ್ಯವಾಗಿತ್ತು. ಬಹುಶಃ ಹಾಗಾಗದೇ ಇರುತ್ತಿದ್ದರೆ ಇಷ್ಟು ಬೇಗ ತಂಡವು ಹೊರ ಬೀಳುತ್ತಿರಲಿಲ್ಲ. ಆದರೂ ನಿರ್ಗಮನವನ್ನು ಶುಭ ಸೂಚನೆಯೊಂದಿಗೆ ಮಾಡುವ ಸಾಮರ್ಥ್ಯ ಧೋನಿಗಿದೆ ಎನ್ನುವುದು ನನ್ನ ನಂಬಿಕೆ" ಎಂದು ಶ್ರೀನಾಥ್ ತಿಳಿಸಿದ್ದಾರೆ.

"ಈ ತಂಡವು ಕಳೆದ ಕೆಲವು ವರ್ಷಗಳಿಂದ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. ಖಂಡಿತಾ ಈ ಟೂರ್ನಮೆಂಟನ್ನು ಅವರು ಗೆಲ್ಲಬೇಕಿತ್ತು" ಎಂದ ಅವರು ಪೂರ್ವತಯಾರಿಯ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸುತ್ತಾ, "ಅವರು ತಂಡವನ್ನು ಸಿದ್ಧಗೊಳಿಸಿದ್ದು, ಅಭ್ಯಾಸ ಪಂದ್ಯಗಳಲ್ಲಿ ತೋರಿದ ನಿರ್ವಹಣೆ ಮತ್ತು ಟೂರ್ನಮೆಂಟ್‌ನ ಆರಂಭಿಕ ಎರಡು ಪಂದ್ಯಗಳ ಫಲಿತಾಂಶಗಳು ಪರಿಪೂರ್ಣವಾಗಿದ್ದವು" ಎಂದರು.

"2007ರ ಟೂರ್ನಮೆಂಟ್ ಗೆದ್ದುಕೊಂಡ ನಂತರ ತಂಡವು ಯಾವುದೇ ತಪ್ಪುಗಳನ್ನು ಮಾಡದಿದ್ದ ಕಾರಣ ಇದನ್ನು ಗೆಲ್ಲಲಾರರು ಎಂದು ಯಾರು ಕೂಡ ಹೇಳುವಂತಿರಲಿಲ್ಲ" ಎಂದು ಭಾರತ ಕಪ್ ಗೆಲ್ಲುತ್ತದೆ ಎಂಬ ತನಗಿದ್ದಿದ್ದ ವಿಶ್ವಾಸವನ್ನು ಅವರು ಬೇಸರದಿಂದಲೇ ಹೇಳಿಕೊಂಡಿದ್ದಾರೆ.

ಅತ್ಯುತ್ತಮ ಅಡಿಪಾಯ ಟೀಮ್ ಇಂಡಿಯಾಕ್ಕೆ ಇದ್ದ ಹೊರತಾಗಿಯೂ ಅವರ ಬ್ಯಾಟಿಂಗ್ ತಂತ್ರಗಳು ಸರಿಯಾಗಿರಲಿಲ್ಲ. ಅವರು ಶಾರ್ಟ್ ಬಾಲ್‌ಗಳಿಗೆ ಆಡಿದ ರೀತಿ ಸಮರ್ಥನೀಯವಲ್ಲ ಎಂದು ವೇಗಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ