ಅಮೆರಿಕ: ಶನಿವಾರ ನಡೆಯಬೇಕಿದ್ದ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಭಾರತ ಮತ್ತು ಕೆನಡಾ ಪಂದ್ಯವು ಮಳೆಯ ಆಟಕ್ಕೆ ಕೊಚ್ಚಿಹೋಯಿತು.
ಮಳೆಯಿಂದಾಗಿ ಎ ಗುಂಪಿನ ಭಾರತ ಮತ್ತು ಕೆನಡಾ ನಡುವಣ ಪಂದ್ಯವು ರದ್ದಾಯಿತು. ಉಭಯ ತಂಡಗಳಿಗೂ ತಲಾ ಒಂದು ಅಂಕ ಹಂಚಿಕೆ ಮಾಡಲಾಯಿತು. ಇದರೊಂದಿಗೆ ಕೆನಡಾ ತಂಡವು ಒಟ್ಟು 3 ಅಂಕ ಗಳಿಸಿ, ಟೂರ್ನಿಯಿಂದ ಹೊರಬಿತ್ತು.
ಭಾರತ ತಂಡವು ಗುಂಪಿನಲ್ಲಿ ಈಗಾಗಲೇ ಅಗ್ರಸ್ಥಾನ ಪಡೆದು ಸೂಪರ್ 8ರ ಹಂತ ಪ್ರವೇಶಿಸಿದೆ. ಎರಡನೇ ಸ್ಥಾನದಲ್ಲಿರುವ ಅಮೆರಿಕವೂ ಎಂಟರ ಹಂತಕ್ಕೆ ಅರ್ಹತೆ ಗಳಿಸಿದೆ. ಶುಕ್ರವಾರ ಅಮೆರಿಕ ಮತ್ತು ಐರ್ಲೆಂಡ್ ನಡುವಣ ಪಂದ್ಯವೂ ಮಳೆಯಿಂದಾಗಿ ರದ್ದಾಗಿತ್ತು.
ರಾತ್ರಿ 8 ಗಂಟೆಗೆ ಪಂದ್ಯ ಆರಂಭ ವಾಗಬೇಕಿತ್ತು. ಆದರೆ ಅದಕ್ಕೂ ಮುನ್ನವೇ ಮಳೆ ಸುರಿಯಲಾರಂಭಿಸಿದ ಕಾರಣ ಟಾಸ್ ಹಾಕಲಿಲ್ಲ. ನಂತರ ಅಂಪೈರ್‌ಗಳು ಎರಡು ಬಾರಿ ಮೈದಾನವನ್ನು ಪರಿಶೀಲಿಸಿ, ಪಂದ್ಯವನ್ನು ರದ್ದುಗೊಳಿಸಿದರು.