ನ್ಯೂಯಾರ್ಕ್: ಭಾರತ ಮತ್ತು ಪಾಕಿಸ್ತಾನ ನಡುವೆ ನಾಳೆ ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾಗೆ ರೋಹಿತ್ ಶರ್ಮಾ ರೂಪದಲ್ಲಿ ಆಘಾತ ಎದುರಾಗಿದೆ. ನಾಳೆ ರೋಹಿತ್ ಆಡುವುದು ಅನುಮಾನ ಎನ್ನಲಾಗುತ್ತಿದೆ.
ರೋಹಿತ್ ಶರ್ಮಾ ಕಳೆದ ಪಂದ್ಯದಲ್ಲೇ ಕೈ ನೋವಿನ ಕಾರಣಕ್ಕೆ ಅರ್ಧದಲ್ಲೇ ಇನಿಂಗ್ಸ್ ಮುಗಿಸಿ ಪೆವಿಲಿಯನ್ ಗೆ ತೆರಳಿದ್ದರು. ಆದರೆ ಪಂದ್ಯದ ಬಳಿಕ ಮಾತನಾಡಿದ್ದ ರೋಹಿತ್ ಗಾಯ ಗಂಭೀರವಲ್ಲ. ಮುಂಜಾಗ್ರತೆ ದೃಷ್ಟಿಯಿಂದ ಅರ್ಧಕ್ಕೇ ಆಟ ನಿಲ್ಲಿಸಿದ್ದಾಗಿ ಹೇಳಿಕೊಂಡಿದ್ದರು. ಆದರೆ ಇದೀಗ ಅವರು ಮತ್ತೆ ಗಾಯಗೊಂಡಿದ್ದಾರೆ.
ಅಭ್ಯಾಸದ ವೇಳೆ ಹೆಬ್ಬರಳಿಗೆ ಗಾಯ ಮಾಡಿಕೊಂಡಿರುವ ರೋಹಿತ್ ರನ್ನು ತಕ್ಷಣವೇ ತಪಾಸಣೆಗೆ ಕರೆದೊಯ್ಯಲಾಗಿದೆ. ಅವರ ಹೆಬ್ಬೆರಳು ಊದಿಕೊಂಡಿದ್ದು, ಗಾಯದ ತೀವ್ರತೆ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ. ಒಂದು ವೇಳೆ ಹೆಬ್ಬೆರಳು ಮುರಿತಕ್ಕೊಳಗಾದರೆ ಅವರು ನಾಳೆಯ ಮಹತ್ವದ ಪಂದ್ಯದಲ್ಲಿ ಆಡುವುದು ಕಷ್ಟವಾಗಲಿದೆ.
ರೋಹಿತ್ ಗಾಯ ಈಗ ಅಭಿಮಾನಿಗಳಿಗೆ ಆತಂಕ ತಂದಿದೆ. ಟಿ20 ವಿಶ್ವಕಪ್ ಗೆ ರೋಹಿತ್ ರಂತಹ ಹೊಡೆಬಡಿಯ ಆಟಗಾರನ ಅಗತ್ಯ ತುಂಬಾ ಇದೆ. ಇಂತಹ ಹೊತ್ತಿನಲ್ಲಿ ಅವರು ಗಾಯಗೊಂಡಿರುವುದು ತಂಡಕ್ಕೆ ಸಂಕಷ್ಟ ತಂದೊಡ್ಡಿದೆ. ಒಂದು ವೇಳೆ ರೋಹಿತ್ ಕಣಕ್ಕಿಳಿಯದೇ ಇದ್ದರೆ ಹಾರ್ದಿಕ್ ಪಾಂಡ್ಯ ತಂಡ ಮುನ್ನಡೆಸಲಿದ್ದಾರೆ.