ಏನು ನಡೆದಿದೆ ಎಂಬುದು ನಮಗಿಬ್ಬರಿಗೂ ಗೊತ್ತು: ಧೋನಿ

ಮಂಗಳವಾರ, 16 ಜೂನ್ 2009 (14:35 IST)
ವೀರೇಂದ್ರ ಸೆಹ್ವಾಗ್ ವಿಚಾರದಲ್ಲುಂಟಾಗಿದೆ ಎನ್ನಲಾದ ಡ್ರೆಸ್ಸಿಂಗ್ ರೂಮ್ 'ಪ್ರಕ್ಷ್ಯುಬ್ಧತೆ' ಸೋಲಿಗೆ ಕಾರಣವಾಯಿತೇ ಎಂಬ ಪ್ರಶ್ನೆಗೆ ಟೀಮ್ ಇಂಡಿಯಾ ಕಪ್ತಾನ ಮಹೇಂದ್ರ ಸಿಂಗ್ ಧೋನಿ ಉತ್ತರಿಸುತ್ತಾ, ನನ್ನ ಮತ್ತು ಸೆಹ್ವಾಗ್ ನಡುವೆ ಏನು ನಡೆದಿದೆ ಎಂಬುದು ನಮಗಿಬ್ಬರಿಗೂ ತಿಳಿದಿದೆ; ಇದರಿಂದ ತಂಡದ ಮೇಲೆ ಯಾವುದೇ ಪರಿಣಾಮವುಂಟಾಗಿಲ್ಲ ಎಂದಿದ್ದಾರೆ.

ಟ್ವೆಂಟಿ-20 ವಿಶ್ವಕಪ್‌ನಿಂದ ಸೂಪರ್ ಎಂಟರಿಂದಲೇ ಹೊರ ಬಿದ್ದಿರುವ ಭಾರತ ತೀವ್ರ ಟೀಕೆಗಳನ್ನು ಎಲ್ಲೆಡೆಗಳಿಂದ ಎದುರಿಸುತ್ತಿದ್ದು, ಸೆಹ್ವಾಗ್ ಮತ್ತು ಧೋನಿ ನಡುವಿನ ವ್ಯತಿರಿಕ್ತ ವಾತಾರವಣದ ಹಿನ್ನಲೆಯೂ ಸೋಲಿಗೆ ಕಾರಣವಾಗಿತ್ತು ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು.

ಈ ಹಿನ್ನಲೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ಧೋನಿ ಡ್ರೆಸ್ಸಿಂಗ್ ರೂಂನಲ್ಲಿ ಅಭಿಪ್ರಾಯ ಬೇಧಗಳು ಕಂಡು ಬಂದಿದ್ದು ಹೌದು ಎಂದು ಒಪ್ಪಿಕೊಂಡಿದ್ದಾರೆ.

"ನಾನೊಂದು ಬಾಟಲಿಯನ್ನು ಹಿಡಿದುಕೊಂಡು, ಇದು ಪಾನೀಯ, ಇದನ್ನು ಕುಡಿಯಬೇಕು ಎಂದು ಹೇಳಿದಂತಲ್ಲ. ಟೂರ್ನಮೆಂಟ್‌ಗೂ ಮೊದಲು ಹೀಗೆಲ್ಲಾ ನಡೆದಿರುವುದು ಅಸಮಾಧಾನವಾಗಿದೆ" ಎಂದರು.

"ಹಾಗೊಂದು ವೇಳೆ ನನ್ನ ಮತ್ತು ಸೆಹ್ವಾಗ್ ನಡುವೆ ಭಿನ್ನಮತಗಳು ಬಂದಿದ್ದೇ ಆದಲ್ಲಿ ನಾವಿಬ್ಬರೂ ಅತ್ಯುತ್ತಮ ಸ್ಥಾನಗಳಲ್ಲಿರುವುದರಿಂದ ಏನು ನಡೆದಿದೆ ಎಂದು ತಿಳಿದುಕೊಳ್ಳುತ್ತಿದ್ದೆವು. ನಮ್ಮ ನಡುವೆ ಏನು ನಡೆದಿದೆ ಎನ್ನುವುದು ನಮಗಿಬ್ಬರಿಗೂ ಗೊತ್ತು. ಇದು ತಂಡದ ವಾತಾವರಣದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಈ ಟೂರ್ನಮೆಂಟ್‌ನಲ್ಲಿ ಕೆಲವು ಪಂದ್ಯಗಳನ್ನು ನಾವು ಕಳೆದುಕೊಂಡ ಹೊರತಾಗಿಯೂ ಡ್ರೆಸ್ಸಿಂಗ್ ರೂಂ ವಾತಾವರಣ ಅತ್ಯುತ್ತಮವಾಗಿದೆ" ಎಂದು ಧೋನಿ ವಿವರಿಸಿದ್ದಾರೆ.

ತಂಡದ ಇಬ್ಬರು ಹಿರಿಯ ಆಟಗಾರರ ನಡುವೆ ವಿರೋಧಾಭಾಸಗಳು ಮನೆ ಮಾಡಿದ್ದಾಗ ತಂಡದ ಇತರ ಸದಸ್ಯರ ಮೇಲೆ ಪರಿಣಾಮ ಬೀರಬಹುದು. ಅದರಿಂದ ಅತ್ಯುತ್ತಮ ಆಟ ನೀಡಲೂ ಅಸಾಧ್ಯವಾಗಬಹುದು. ಆದರೆ ಈ ನಿಟ್ಟಿನಲ್ಲಿ ನನ್ನ ತಂಡದ ಆಟಗಾರರು ಸಹಕರಿಸುತ್ತಿದ್ದಾರೆ. ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಲು ನಾವು ಕೆಲವು ವಿಚಾರಗಳ ಬಗ್ಗೆ ಹಾಸ್ಯ ಮಾಡುತ್ತಿರುತ್ತೇವೆ. ಮುಂದೆ ಇಂತದ್ದು ನಡೆಯದು ಮತ್ತು ಒತ್ತಡ ಕಡಿಮೆಯಾಗುವ ಭರವಸೆಯೂ ನನಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ವೆಬ್ದುನಿಯಾವನ್ನು ಓದಿ