IPL 2025: ಚೆನ್ನೈ ವಿರುದ್ಧದ ರೋಚಕ ಪಂದ್ಯದಲ್ಲಿ ಗೆದ್ದ ಆರ್‌ಸಿಬಿ: ಮತ್ತೆ ಅಗ್ರಸ್ಥಾನದೊಂದಿಗೆ ಪ್ಲೇಆಫ್‌ಗೆ ಸನಿಹ

Sampriya

ಭಾನುವಾರ, 4 ಮೇ 2025 (00:02 IST)
Photo Courtesy X
ಬೆಂಗಳೂರು: ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಸಾಂಘಿಕ ಪ್ರದರ್ಶನ ನೀಡಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ನ ರೋಚಕ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 2 ರನ್‌ಗಳ ಜಯ ಸಾಧಿಸಿತು.

ಟಾಸ್‌ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ, ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ರನ್ ಹೊಳೆ ಹರಿಸಿತು., ಎದುರಾಳಿ ತಂಡಕ್ಕೆ 214 ರನ್‌ಗಳ ಸವಾಲಿನ ಗುರಿಯನ್ನು ನೀಡಿತ್ತು.

ವಿರಾಟ್‌ ಕೊಹ್ಲಿ(62 ರನ್‌, 33 ಎಸೆತ) ಮತ್ತು ಜಾಕೊಬ್‌ ಬೆಥೆಲ್‌(55 ರನ್‌, 33 ಎಸೆತ) ಕೇವಲ 9.5 ಓವರ್‌ಗಳಲ್ಲೇ 97 ರನ್‌ ಕೂಡಿಸಿ ಮಿಂಚಿನ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದರು. ಮಧ್ಯಮ ಕ್ರಮಾಂಕದ ಆಟಗಾರರು ಎಡವಿದರೂ ಕೊನೆಯಲ್ಲಿ ಬಂದ ರೊಯಾರಿಯೊ ಶೆಫರ್ಡ್‌ ಕೇವಲ 14 ಎಸೆತಗಳಲ್ಲಿ 53 ರನ್‌ ಗಳಿಸಿ ಎರಡನೇ ಅತಿವೇಗದ ಅರ್ಧಶತಕ ಸಿಡಿಸಿದರು.

ಆರ್‌ಸಿಬಿ ನೀಡಿದ ಗುರಿ ಬೆನ್ನತ್ತಿದ್ದ ಸಿಎಸ್‌ಕೆ ತಂಡ, ಉತ್ತಮ ಬ್ಯಾಟಿಂಗ್ ಪ್ರದರ್ಶನದ ಮೂಲಕ ಪ್ರಬಲ ಪೈಪೋಟಿ ನೀಡಿತು. ಆರಂಭಿಕ ಆಟಗಾರ 17ರ ಹರೆಯದ ಆಯುಷ್ ಮಾತ್ರೆ 48 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 9 ಫೋರ್ ಒಳಗೊಂಡು 94 ರನ್ ಸಿಡಿಸಿ ಲುಂಗಿ ಎನ್ ಗಿಡಿಗೆ ವಿಕೆಟ್ ಒಪ್ಪಿಸುವ ಮೂಲಕ ಕೇವಲ ಆರು ರನ್‌ಗಳಿಂದ ಶತಕ ವಂಚಿತರಾದರು. ಅವರ ವಿಕೆಟ್‌ ಉರಳುತ್ತಿದ್ದಂತೆ ಪಂದ್ಯ ತಿರುವು ಪಡೆಯಿತು.

ಆಲ್ ರೌಂಡರ್ ರವೀಂದ್ರ ಜಡೇಜಾ, ಆಯುಷ್ ಜೊತೆಗೂಡಿ ತಂಡಕ್ಕೆ ಬಲ‌‌ ತುಂಬಿದರು. ಆಯುಷ್ ಹಾಗೂ ಡೆವಾಲ್ಡ್ ಬ್ರೆವಿಸ್ ವಿಕೆಟ್‌ಗಳನ್ನು ಒಂದರ ಮೇಲೊಂದರಂತೆ ಕಬಳಿಸಿದ ಎನ್ ಗಿಡಿ, ಸಿಎಸ್‌ಕೆ ಆಟಗಾರರನ್ನು ಕಾಡಿದರು.

ಚೆನ್ನೈ ತಂಡಕ್ಕೆ 11 ಪಂದ್ಯಗಳಲ್ಲಿ ಇದು ಒಂಬತ್ತನೇ ಸೋಲಾಗಿದೆ. ಧೋನಿ ಪಡೆ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ. ಈ ಗೆಲುವಿನೊಡನೇ ಆರ್‌ಸಿಬಿ ತಂಡ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದು, ಪ್ಲೇ ಆಫ್‌ಗೆ ಸ್ಥಾನವನ್ನು ಬಹುತೇಕ ಖಚಿತಪಡಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ