ಪ್ರಸಕ್ತ ಇಂಗ್ಲೆಂಡ್‌ನಲ್ಲಿರುವ ಟೀಮ್ ಇಂಡಿಯಾ ಟ್ವೆಂಟಿ-20 ವಿಶ್ವಕಪ್ ತಂಡದ ವ್ಯವಸ್ಥಾಪಕ ವಿ. ಚಾಮುಂಡೇಶ್ವರನಾಥ್‌ರನ್ನು ಲೈಂಗಿಕ ಕಿರುಕುಳ ಮತ್ತು ಭ್ರಷ್ಟಾಚಾರ ಆರೋಪಗಳ ಮೇಲೆ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಅಮಾನತು ಮಾಡಲಾಗಿದೆ ಎಂದು ಆಂಧ್ರಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ತಿಳಿಸಿದೆ.
ಚಾಮುಂಡಿಯವರ ವಿರುದ್ಧ ಇರುವ ಗಂಭೀರ ಆಪಾದನೆಗಳ ಹಿನ್ನಲೆಯಲ್ಲಿ ಅವರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಅಮಾನತು ಮಾಡಲಾಗಿದೆ ಎಂದು ಆಂಧ್ರಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಗೋಕರಾಜು ಗಂಗಾರಾಜು ಪ್ರಕಟಿಸಿದ್ದಾರೆ.
ಪ್ರಸಕ್ತ ಇಂಗ್ಲೆಂಡ್‌ನಲ್ಲಿರುವ ಚಾಮುಂಡಿಯವರು ಟೀಮ್ ಇಂಡಿಯಾ ಟ್ವೆಂಟಿ-20 ವಿಶ್ವಕಪ್ ತಂಡದ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾನು ಶನಿವಾರ ತವರಿಗೆ ಮರಳಲಿದ್ದು ಆರೋಪಗಳನ್ನು ಸುಳ್ಳೆಂದು ಸಾಬೀತುಪಡಿಸುತ್ತೇನೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅವರು ಸವಾಲು ಹಾಕಿದ್ದಾರೆ.
"ಮಹಿಳಾ ಕ್ರಿಕೆಟ್ ಆಟಗಾರರು ತಂಡಕ್ಕೆ ವಾಪಸಾಗಬೇಕಾದರೆ ದೈಹಿಕ ಸುಖ ನೀಡಬೇಕೆಂದು ಬೇಡಿಕೆಯಿಟ್ಟಿದ್ದರು ಎಂದು ಕೆಲವು ಆಟಗಾರರು ಅಸೋಸಿಯೇಷನ್‌ಗೆ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಅವರಿಗೆ ಶೋಕಾಸ್ ನೊಟೀಸ್ ನೀಡಲಾಗಿದ್ದು, ತನ್ನ ನಿರಪರಾಧಿತನವನ್ನು ಅವರು ಸಾಬೀತುಪಡಿಸಬೇಕು. ಪ್ರಕರಣ ಅಂತ್ಯ ಕಾಣುವವರೆಗೆ ಚಾಮುಂಡಿಯವರನ್ನು ಅಮಾನತಿನಲ್ಲಿಡಲಾಗುತ್ತದೆ" ಎಂದು ಗಂಗಾರಾಜು ತಿಳಿಸಿದ್ದಾರೆ.
ಐಪಿಎಲ್ ಪಂದ್ಯಕ್ಕಾಗಿ ವಿಶಾಖಪಟ್ಟಣ ಕ್ರಿಕೆಟ್ ಕ್ರೀಡಾಂಗಣವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಚಾಮುಂಡೇಶ್ವರನಾಥ್ ಅನಾಮಿಕ ಕಂಪನಿಯೊಂದರಿಂದ ಆಸನಗಳನ್ನು ಖರೀದಿಸಲು ಮುಂದಾಗಿದ್ದರು. ಪ್ರತೀ ಆಸನಕ್ಕೆ 1,350 ರೂಪಾಯಿಗಳಂತೆ ಒಟ್ಟು 24,000 ಆಸನಗಳಿಗಾಗಿ 3.80 ಕೋಟಿ ರೂಪಾಯಿಗಳ ಬೇಡಿಕೆಯನ್ನು ಅವರು ಮುಂದಿಟ್ಟಿದ್ದರು. ಆ ಆಸನದ ನಿಜವಾದ ಬೆಲೆ 600 ರೂಪಾಯಿಗಳ ಒಳಗೆ. ಚಾಮುಂಡಿಯವರು ಕಂಪನಿಯ ಜತೆ ಒಳ ಒಪ್ಪಂದ ಮಾಡಿಕೊಂಡು ಅವ್ಯವಹಾರ ನಡೆಸಿದ್ದಾರೆ ಎಂದು ಆಂಧ್ರಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಆರೋಪಿಸಿದೆ.
ಇಷ್ಟೇ ಅಲ್ಲದೆ ಚಾಮುಂಡಿಯವರು ಈಗಾಗಲೇ ಅಸೋಸಿಯೇಷನ್ ವತಿಯಿಂದ ಎರಡು ಕೋಟಿ ರೂಪಾಯಿಗಳನ್ನು ಅನಾಮಿಕ ಕಂಪನಿಗೆ ಪಾವತಿ ಮಾಡಿದ್ದಾರೆ ಎಂದೂ ಹೇಳಲಾಗಿದೆ.