ಮಳೆಯಿಂದ ತೊಂದರೆಗೊಳಗಾಗುವ ಟ್ವೆಂಟಿ-20 ಕ್ರಿಕೆಟ್ ಪಂದ್ಯದಿಂದ ಫಲಿತಾಂಶ ಪಡೆಯುವ ಸಲುವಾಗಿ ಡಕ್‌ವರ್ತ್-ಲೂಯಿಸ್ ನಿಯಮವನ್ನು ಅಳವಡಿಸಿರುವ ಬಗ್ಗೆ ಹಲವರು ಪ್ರಶ್ನೆ ಮಾಡಿರುವ ಕಾರಣ ನಿಯಮವನ್ನು ಮರುಪರಿಶೀಲನೆ ನಡೆಸಲಾಗುವ ನಿರ್ಧಾರಕ್ಕೆ ಬರಲಾಗಿದೆ.
ವೆಸ್ಟ್‌ಇಂಡೀಸ್ ವಿರುದ್ಧದ ಮಳೆ ಬಾಧಿತ ಟ್ವೆಂಟಿ-20 ವಿಶ್ವಕಪ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಡಕ್‌ವರ್ತ್ ಲೂಯಿಸ್ ನಿಯಮದ ಪ್ರಕಾರ ಐದು ವಿಕೆಟ್‌ಗಳ ಸೋಲುಂಡಿತ್ತು. 20 ಓವರುಗಳಲ್ಲಿ 161 ರನ್ ಮಾಡಿದ್ದ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸಲು ವೆಸ್ಟ್‌ಇಂಡೀಸ್ ಒಂಬತ್ತು ಓವರುಗಳಲ್ಲಿ 80 ರನ್ ಮಾಡಬೇಕೆಂಬ ಗುರಿಯನ್ನು ನೀಡಲಾಗಿತ್ತು. ಇದು ಹಲವರ ಹುಬ್ಬೇರಿಸಿತ್ತು.
"ಹಲವರು ಸಲಹೆಗಳನ್ನು ನೀಡಿರುವ ಕಾರಣದಿಂದ ನಾವು ನಿಯಮಗಳತ್ತ ಎಚ್ಚರಿಕೆಯಿಂದ ಗಮನ ಹರಿಸಬೇಕಾಗಿದೆ. ಟ್ವೆಂಟಿ-20 ಕ್ರಿಕೆಟ್ ಪ್ರಕಾರಕ್ಕೆ ಹೊಂದಾಣಿಯಾಗಲು ಏನೆಲ್ಲ ಬೇಕು ಎಂಬುದನ್ನು ಪರಿಶೀಲನೆ ನಡೆಸುತ್ತೇವೆ" ಎಂದು ಈ ನಿಯಮವನ್ನು ಫ್ರಾಂಕ್ ಡಕ್‌ವರ್ತ್ ಜತೆ ಆವಿಷ್ಕರಿಸಿದ ಲೂಯಿಸ್ ತಿಳಿಸಿದ್ದಾರೆ.
ಟ್ವೆಂಟಿ-20 ವಿಶ್ವಕಪ್‌ನಿಂದ ಇನ್ನಷ್ಟು ಮಾಹಿತಿಯನ್ನು ಪಡೆದುಕೊಂಡ ನಂತರ ನಿಯಮದ ಬಗ್ಗೆ ಇಬ್ಬರೂ ಮರುಪರಿಶೀಲನೆ ನಡೆಸುವುದಾಗಿ ಡಕ್‌ವರ್ತ್ ತಿಳಿಸಿದ್ದಾರೆ.
"ಟ್ವೆಂಟಿ-20 ವಿಶ್ವಕಪ್ ಟೂರ್ನಮೆಂಟ್ ಮುಗಿದ ನಂತರ ನಾವು ಡಕ್‌ವರ್ತ್-ಲೂಯಿಸ್ ನಿಯಮವನ್ನು ಮರುಪರಿಶೀಲನೆಗೊಳಪಡಿಸಲಿದ್ದೇವೆ" ಎಂದು ಅವರು ತಿಳಿಸಿದ್ದಾರೆಂದು 'ದಿ ಗಾರ್ಡಿಯನ್' ವರದಿ ಮಾಡಿದೆ.
"ಟೂರ್ನಮೆಂಟ್ ಮುಗಿಯುವವರೆಗೆ ನಾವು ಕಾಯವುದು ಸೂಕ್ತ ಎಂಬುದು ನಮ್ಮ ಯೋಚನೆ. ಆಗ ನಮ್ಮಲ್ಲಿರುವ ಮಾಹಿತಿಗಳಿಗೆ ಇನ್ನಷ್ಟು ಸೇರ್ಪಡೆಯಾದಂತಾಗುತ್ತದೆ" ಎಂದು ಡಕ್‌ವರ್ತ್ ತಿಳಿಸಿದರು.