ಬಳಲಿಕೆಯಲ್ಲ, ಸೆಹ್ವಾಗ್ ಅನುಪಸ್ಥಿತಿ ಮುಳುವಾಯಿತು: ಗಂಗೂಲಿ

ಗುರುವಾರ, 18 ಜೂನ್ 2009 (13:18 IST)
ಟ್ವೆಂಟಿ-20 ವಿಶ್ವಕಪ್ ಸೋಲಿಗೆ ಬಳಲಿಕೆ ಕಾರಣ ಎಂಬ ತರಬೇತುದಾರ ಗ್ಯಾರಿ ಕರ್ಸ್ಟನ್‌ರ ವಾದವನ್ನು ತಳ್ಳಿ ಹಾಕಿರುವ ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ, ಟೂರ್ನಮೆಂಟ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ಪಡೆಗೆ ವೀರೇಂದ್ರ ಸೆಹ್ವಾಗ್ ಅಲಭ್ಯರಾದದ್ದು ಪ್ರಮುಖ ಹಿನ್ನಡೆಯಾಯಿತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಅತಿಯಾದ ಕ್ರಿಕೆಟ್ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ಕಾರಣದಿಂದ ವಿಶ್ವಕಪ್‌ನಲ್ಲಿ ಸೋಲುಂಟಾಯಿತು ಎಂದು ಆರೋಪಿಸಿದ್ದ ಕರ್ಸ್ಟನ್ ಹೇಳಿಕೆಗೆ ವಿರುದ್ಧವಾಗಿ ಮಾತನಾಡಿದ್ದ ನಾಯಕ ಧೋನಿ, ಸೋಲಿಗೆ 'ಸುಸ್ತು' ಕಾರಣವಲ್ಲ ಎಂದಿದ್ದರು. ಆ ಮೂಲಕ ನಾಯಕ-ಕೋಚ್ ನಡುವಿನ ಭಿನ್ನಾಭಿಪ್ರಾಯಗಳು ಮುಂದುವರಿದಿವೆ.
PTI

"ಇದನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಯಾಕೆಂದರೆ ಅವರೆಲ್ಲ ಎಳೆಯ ಹುಡುಗರು. ಅವರಿಗೀಗ ಕೇವಲ 22, 23 ವರ್ಷಗಳಷ್ಟೇ, ಈಗಷ್ಟೇ ಅವರು ತಮ್ಮ ಕ್ರೀಡಾಜೀವನವನ್ನು ಆರಂಭಿಸಿದ್ದಾರೆ. ಅವರು ಹೆಚ್ಚಿನ ಕ್ರಿಕೆಟ್ ಆಡಿದ್ದಾರೆಂಬುದು ನನಗೆ ಗೊತ್ತು. ಆದರೆ ಅವರೆಲ್ಲರೂ ಅಲ್ಲ ಎಂಬುದು ಗಮನಾರ್ಹ" ಎಂದು ಗಂಗೂಲಿ ಸೋಲಿನ ವಿಶ್ಲೇಷಣೆ ನಡೆಸಿದ್ದಾರೆ.

"ಧೋನಿ, ಯುವರಾಜ್ ಸಿಂಗ್, ಹರಭಜನ್ ಸಿಂಗ್ ಮತ್ತು ಜಹೀರ್ ಖಾನ್‌ರನ್ನು ಈ ಪಟ್ಟಿಗೆ ಸೇರಿಸಬಹುದು. ಯಾಕೆಂದರೆ ಅವರು ಟೆಸ್ಟ್ ತಂಡದ ಸ್ಥಿರ ಸದಸ್ಯರು. ಅವರು ಸಾಕಷ್ಟು ಪ್ರವಾಸಗಳನ್ನು ಇತ್ತೀಚೆಗೆ ಮಾಡಿದ್ದರು" ಎಂದರು.

ಭಾರತದ ಯಶಸ್ವೀ ಕಪ್ತಾನನೆಂಬ ಬಿರುದು ಪಡೆದಿರುವ ಗಂಗೂಲಿಯವರ ಪ್ರಕಾರ ಸೆಹ್ವಾಗ್‌ರ ಅನುಪಸ್ಥಿತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಟೂರ್ನಮೆಂಟ್‌ನಲ್ಲಿ ಭಾರತಕ್ಕೆ ಮಹತ್ವದ ಹಿನ್ನಡೆಯಾಗಿದೆ.

"ಸೆಹ್ವಾಗ್‌ರಿಂದಾಗಿ ತಂಡಕ್ಕೆ ಪ್ರಮುಖ ಹೊಡೆತ ಬಿತ್ತು. ರೋಹಿತ್ ಶರ್ಮಾ ಮೊದಲ ಬಾರಿಗೆ ಆರಂಭಿಕ ಆಟಗಾರನಾಗಿ ಬ್ಯಾಟಿಂಗ್ ಮಾಡಲು ಕಣಕ್ಕಿಳಿದಿದ್ದರು. ಆದರೆ ಕೊನೆಯ ಮೂರು ಪಂದ್ಯಗಳಲ್ಲಿ ಅವರ ಪ್ರದರ್ಶನ ಉತ್ತಮವಾಗಿರಲಿಲ್ಲ" ಎಂದರು.
PTI

"ಸೆಹ್ವಾಗ್, ಸಚಿನ್ ತೆಂಡೂಲ್ಕರ್ ಮತ್ತು ಗೌತಮ್ ಗಂಭೀರ್ ನಿಗದಿತ ಓವರ್‌ಗಳ ಪಂದ್ಯಗಳಲ್ಲಿ ಭಾರತೀಯ ತಂಡದ ಪ್ರಮುಖ ಆಟಗಾರರು. ಇಲ್ಲಿ ಇಬ್ಬರನ್ನು ತಂಡ ಹೊಂದದೇ ಇರುವುದರಿಂದ ಭಾರತ ದುರ್ಬಲವಾಯಿತು" ಎಂದು ದಾದಾ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವಕಪ್ ಸೋಲಿಗಾಗಿ ಯಾವುದೇ ಪ್ರತಿಕೂಲ ತೀರ್ಮಾನ ಕೊಡಲು ನಿರಾಕರಿಸಿರುವ ಗಂಗೂಲಿ, ಭಾರತಕ್ಕೆ ಐದು ದಿನಗಳ ಆಟ ಮತ್ತು ಅಂತಾರಾಷ್ಟ್ರೀಯ ಏಕದಿನಗಳು ಮಾತ್ರ ನಿಜವಾದ ಸತ್ವಪರೀಕ್ಷೆ ಹೊರತು ಟ್ವೆಂಟಿ-20ಯಲ್ಲ ಎಂದಿದ್ದಾರೆ.

"ಆಟದಲ್ಲಿ ಇದೆಲ್ಲ ಸಾಮಾನ್ಯ. ಈಗಿನ ಫಲಿತಾಂಶದಿಂದ ಭಾರತದ ಬೆಂಬಲಿಗರಿಗೆ ನಿರಾಸೆಯಾಗಿರಬಹುದು. ಆದರೆ ಇದೇ ತಂಡ ಕಳೆದ ಒಂದೂವರೆ ವರ್ಷಗಳ ಹಿಂದೆ ಶ್ರೇಷ್ಠ ಪ್ರದರ್ಶನ ನೀಡಿತ್ತು. ಈ ಟೂರ್ನಮೆಂಟ್‌ನಲ್ಲಿ ಕೊಂಚ ಕಳಪೆ ಪ್ರದರ್ಶನ ಬಂದಿದೆ. ಆದರೆ ಇದೆಲ್ಲ ಕ್ರೀಡೆಯಲ್ಲಿ ಮಾಮೂಲಿ" ಎಂದು ಟೀಕಾಕಾರರಿಗೆ ಸಮಾಧಾನದಿಂದಿರುವಂತೆ ಪರೋಕ್ಷವಾಗಿ ತಿಳಿಸಿದರು.

"ನನ್ನ ಪ್ರಕಾರ ಇಲ್ಲಿ ನಾವು ಮೇಲಕ್ಕೆ ಅಥವಾ ಕೆಳಕ್ಕೆ ಹೆಚ್ಚಿನ ಓಲಾಟ ನಡೆಸಬಾರದು. ನಮ್ಮ ಕ್ರಿಕೆಟಿಗರಿಗೆ ನಿಜವಾದ ಪರೀಕ್ಷೆಯಿರುವುದು ಟೆಸ್ಟ್ ಮತ್ತು 50 ಓವರುಗಳ ಪಂದ್ಯಗಳಲ್ಲಿ. ಟೆಸ್ಟ್ ಪಂದ್ಯಗಳಲ್ಲಿ ಇತ್ತೀಚಿನ ದಿನಗಳಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡಿದೆ" ಎಂದಿದ್ದಾರೆ.