ಟ್ವೆಂಟಿ-20 ವಿಶ್ವಕಪ್‌ನಿಂದ ಭಾರತ ಹೊರಬೀಳಲು ಬಳಲಿಕೆ ಕಾರಣವೆಂಬ ಗ್ಯಾರಿ ಕರ್ಸ್ಟನ್ ವಾದವನ್ನು ಆಸ್ಟ್ರೇಲಿಯಾ ಮಾಜಿ ಕಪ್ತಾನ ಸ್ಟೀವ್ ವಾ ತಳ್ಳಿ ಹಾಕಿದ್ದು, ಕೆಲ ಪ್ರಮುಖ ತಪ್ಪುಗಳಿಂದಾಗಿ ಮಹೇಂದ್ರ ಸಿಂಗ್ ಧೋನಿ ಪಡೆ ಸೋಲು ಕಂಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಸೋಲಿಗೆ ಬಳಲಿಕೆಯನ್ನು ಸರಿಯಾದ ಕಾರಣವೆಂದು ಪರಿಗಣಿಸಲಾಗದು. ಈ ಹೊತ್ತಿನಲ್ಲಿ ಪ್ರತಿಯೊಬ್ಬರೂ ಸಾಕಷ್ಟು ಕ್ರಿಕೆಟ್ ಆಡಿರುತ್ತಾರೆ ಎಂಬುದು ನನ್ನ ಅನಿಸಿಕೆ. ಒಟ್ಟಾರೆ ಹೇಳುವುದಾದರೆ ಇತ್ತೀಚಿನ ಕೆಲವು ದಿನಗಳಲ್ಲಿ ಟೀಮ್ ಇಂಡಿಯಾ ಅತ್ಯುತ್ತಮ ಆಟ ನೀಡಿಲ್ಲ ಎನ್ನುವುದೇ ಪ್ರಮುಖ ವಿಚಾರವಾಗುತ್ತದೆ. ಅವರಲ್ಲಿರುವ ಚುರುಕುತನ ಸಾಲದು. ಅಲ್ಲದೆ ಕೆಲವು ಪ್ರಮುಖ ತಪ್ಪುಗಳನ್ನು ಅವರು ಎಸಗಿದ್ದಾರೆ. ಹೀಗಾಗಿ ನಿರಾಸೆ ಅನುಭವಿಸಬೇಕಾಯಿತು" ಎಂದು ವಾ ಪತ್ರಕರ್ತರೊಂದಿಗೆ ಮಾತನಾಡುತ್ತಾ ತಿಳಿಸಿದರು.
ಪ್ರತಿಷ್ಠಿತ ಟೂರ್ನಮೆಂಟ್‌ನಿಂದ ಸೂಪರ್ ಎಂಟರಿಂದಲೇ ವಾಪಸಾಗಲು ಆಟಗಾರರ ಬಳಲಿಕೆಯೇ ಪ್ರಮುಖ ಕಾರಣ ಎಂದು ಭಾರತೀಯ ತಂಡದ ತರಬೇತುದಾರ ಗ್ಯಾರಿ ಕರ್ಸ್ಟನ್ ಅಭಿಪ್ರಾಯಪಟ್ಟಿದ್ದರು.
"ಟ್ವೆಂಟಿ-20 ಕ್ರಿಕೆಟ್ ಪ್ರಾಕಾರದಲ್ಲಿ ಸಾಕಷ್ಟು ತಿರುವುಗಳಿರುತ್ತವೆ. ಇಲ್ಲಿ ಯಾರನ್ನೂ ನಿರ್ದಿಷ್ಟವಾಗಿ ಫೇವರಿಟ್ ಎಂದು ಹೇಳಲಾಗದು. ಇದು ಇಡೀ ಭಾರತಕ್ಕೆ ನಿರಾಸೆ ತಂದಿತು. ಇಲ್ಲಿ 1.2 ಬಿಲಿಯನ್ ಜನಕ್ಕೆ ನಿರಾಸೆಯಾಗಿದೆ ಎಂಬುದು ನನಗೆ ಗೊತ್ತು. ಆದರೆ ಅತ್ತ 20 ಮಿಲಿಯನ್ ಆಸ್ಟ್ರೇಲಿಯನ್ನರು ಸಂಪೂರ್ಣ ನಿರಾಶೆ ಅನುಭವಿಸಿದ್ದಾರೆ" ಎಂದು ನುಡಿದರು.
ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಜತೆ ಉತ್ತರ ವಲಯದ ಕಚೇರಿಯಲ್ಲಿ ಮಾತುಕತೆ ಮುಗಿಸಿ ಹೊರಬಂದ ವಾ ಪತ್ರಕರ್ತರೊಂದಿಗೆ ಕೆಲ ಹೊತ್ತು ಕಳೆದರು.
ಧೋನಿಯ ನಾಯಕತ್ವದ ಬಗ್ಗೆ ಪತ್ರಕರ್ತರೊಬ್ಬರು ಪ್ರಶ್ನಿಸಿದಾಗ ಅವರು, "ಅವರೊಬ್ಬ ಅತ್ಯುತ್ತಮ ಕಪ್ತಾನ. ಶ್ರೇಷ್ಠ ನಿರ್ವಹಣೆಯನ್ನೇ ಅವರು ನೀಡಿದ್ದಾರೆ. ಜನ ಈಗ ನಡೆದಿರುವುದಕ್ಕೆ ತೀವ್ರ ಭಾವಾವೇಶಕ್ಕೊಳಗಾಗಿದ್ದಾರೆ" ಎಂದರು.