ಸರಿಗಮಪ ಸ್ಪರ್ಧಿಗಳ ಕಷ್ಟಕ್ಕೆ ವೇದಿಕೆಯಲ್ಲೇ ಸಹಾಯ ಘೋಷಿಸಿದ ಅರ್ಜುನ್ ಜನ್ಯಾ
ಸೋಮವಾರ, 10 ಫೆಬ್ರವರಿ 2020 (10:44 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಸರಿಗಮಪ ಹಾಡಿನ ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳಾಗಿ ಬಂದಿದ್ದ ಹುಟ್ಟು ಅಂಧರಾದ ಅವಳಿ ಸಹೋದರಿಯರ ಕಷ್ಟಕ್ಕೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಮರುಗಿದ್ದಾರೆ.
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಅಂಧ ಗಾಯಕರಾದ ರತ್ಮಮ್ಮ ಮತ್ತು ಮಂಜಮ್ಮ ತಮ್ಮ ಊರಿನ ಮಾರಮ್ಮನ ದೇವಾಲಯದ ಮುಂದೆ ಹಾಡಿ ಬಂದ ಹಣದಿಂದ ತಮ್ಮಿಡೀ ಕುಟುಂಬವನ್ನು ಸಾಕಿ ಸಲಹುತ್ತಿದ್ದರು. ಯಾರೋ ಇವರ ಹಾಡಿನ ವಿಡಿಯೋವನ್ನು ಜೀ ವಾಹಿನಿಗೆ ಕಳುಹಿಸಿದ್ದರಿಂದ ಸರಿಗಮಪ ಶೋಗೆ ಇಬ್ಬರೂ ಆಯ್ಕೆಯಾಗಿದ್ದರು.
ಅದರಂತೆ ಇದೀಗ ಅಡಿಷನ್ ನಲ್ಲಿ ಭಾಗವಹಿಸಿ ಇಬ್ಬರೂ ತಮ್ಮ ಜೀವನದ ಕಷ್ಟ ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ. ತಮ್ಮಿಡೀ ಕುಟುಂಬವನ್ನು ಈ ಅಂಧ ಸಹೋದರಿಯರು ಹಾಡಿ ಬಂದ ಹಣದಲ್ಲಿ ನೋಡಿಕೊಳ್ಳುತ್ತಿರುವುದಾಗಿ ಹೇಳಿದರು. ಅಷ್ಟೇ ಅಲ್ಲ ಎಷ್ಟೋ ದಿನ ಹಸಿವಿನಿಂದ ಕಂಗೆಟ್ಟಿದ್ದಾಗಿ ಹೇಳಿದರು. ಹಸಿವು ತಾಳಲಾರದೆ ಹಾಡಿ ಹಣ ಸಂಪಾದನೆಗೆ ಈ ಮಾರ್ಗ ಕಂಡುಕೊಂಡಿದ್ದಾಗಿ ಈ ಸಹೋದರಿಯರು ಹೇಳಿದಾಗ ಅಲ್ಲಿದ್ದವರ ಕಣ್ಣಲ್ಲಿ ನೀರು ಬಂದಿತ್ತು.
ಇವರನ್ನು ವಿಶೇಷ ಸ್ಪರ್ಧಿಗಳಾಗಿ ಸ್ಪರ್ಧೆಯಲ್ಲಿ ಉಳಿಸಿಕೊಳ್ಳಲು ತೀರ್ಮಾನಿಸಿದ ತೀರ್ಪುಗಾರರಾದ ನಾದಬ್ರಹ್ಮ ಹಂಸಲೇಖ ಬಳಿಕ ನಿಮ್ಮ ಜೀವನ ಸುಧಾರಿಸಲು ನಮ್ಮಿಂದ ಏನು ಮಾಡಲು ಸಾಧ‍್ಯವೋ ಅದೆಲ್ಲವನ್ನೂ ಮಾಡುತ್ತೇವೆ ಎಂದಿದ್ದಾರೆ. ಅದರಲ್ಲೂ ವಿಶೇಷವಾಗಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಇನ್ಮೇಲೆ ನಿಮ್ಮ ಮನೆಗೆ ತಿಂಗಳ ದಿನಸಿಗೆ ಏನೇನು ಬೇಕಾಗುತ್ತದೋ ಅದೆಲ್ಲವನ್ನೂ ನನ್ನ ಕಡೆಯಿಂದ ನನ್ನ ಕೈಲಾಗುವವರೆಗೂ ತಲುಪಿಸಲು ವ್ಯವಸ್ಥೆ ಮಾಡುತ್ತೇನೆ. ಇನ್ನು ಮುಂದೆ ನೀವು ಹಸಿವಿನಿಂದ ಕೂರುವ ಪ್ರಶ್ನೆಯೇ ಬರದು ಎಂದು ಭರವಸೆ ಕೊಟ್ಟರು. ಅಂತೂ ಇಬ್ಬರನ್ನೂ ಸ್ಪರ್ಧೆಗೆ ಸೇರಿಸಿಕೊಂಡಿರುವುದಕ್ಕೆ ವೀಕ್ಷಕರಿಂದಲೂ ಭಾರೀ ಮೆಚ್ಚುಗೆ ಬಂದಿದೆ.