ಬಿಬಿಕೆ9: ‘ದುರಾಸೆ’ ಎಂಬ ಪದದಿಂದ ಇಬ್ಬಾಗವಾದ ಮನೆ

ಬುಧವಾರ, 26 ಅಕ್ಟೋಬರ್ 2022 (09:50 IST)
Photo Courtesy: Twitter
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ನಿನ್ನೆ ದಿನ ಅರುಣ್ ಸಾಗರ್ ದುರಾಸೆ ಎಂಬ ಪದ ಬಳಸಿದ್ದು ಇಡೀ ಮನೆ ಹತ್ತಿ ಉರಿಯುವಂತೆ ಮಾಡಿದೆ.

ದೀಪಾವಳಿ ಹಬ್ಬದ ನಿಮಿತ್ತ ಮನೆಯವರಿಂದ ಉಡುಗೊರೆ ಪಡೆಯಲು ಬಿಗ್ ಬಾಸ್ ಟಾಸ್ಕ್ ನೀಡಿತ್ತು. ಈ ಟಾಸ್ಕ್ ಆಡುವ ವಿಚಾರವಾಗಿ ಕ್ಯಾಪ್ಟನ್ ಸಾನಿಯಾ ನೇತೃತ್ವದಲ್ಲಿ ಮನೆ ಮಂದಿ ಯಾರೆಲ್ಲಾ ಟಾಸ್ಕ್ ಆಡಬೇಕು ಎಂದು ಚರ್ಚೆ ಮಾಡುತ್ತಿದ್ದರು. ಈ ವೇಳೆ ಅರುಣ್ ಸಾಗರ್ ಕ್ಯಾಪ್ಟನ್ಸಿ ಪಾಯಿಂಟ್ ಬೇಕು, ಮನೆಯವರ ಉಡುಗೊರೆಯೂ ಬೇಕು ಎಂಬುದು ದುರಾಸೆ ಎಂದಿದ್ದರು.

ಅವರ ಈ ಮಾತು ನೇಹಾ ಗೌಡ, ರೂಪೇಶ್ ರಾಜಣ್ಣ ಸೇರಿದಂತೆ ಮನೆಯ ಕೆಲವು ಸದಸ್ಯರ ಅಸಮಾಧಾನಕ್ಕೆ ಕಾರಣವಾಯಿತು. ನೀವು ಹಾಗೆ ಹೇಳಿದ್ದು ತಪ್ಪು ಎಂದು ಮೊದಲು ರೂಪೇಶ್ ರಾಜಣ್ಣ ಮತ್ತು ನೇಹಾ ಗೌಡ ಅರುಣ್ ಸಾಗರ್ ಗೆ ಮನವರಿಕೆ ಮಾಡಲು ಶುರು ಮಾಡಿದರು. ಈ ವೇಳೆ ರೂಪೇಶ್ ರಾಜಣ್ಣ ಮತ್ತು ಅರುಣ್ ಸಾಗರ್ ನಡುವೆ ಬಿರುಸಿನ ಮಾತಾಯಿತು. ಈ ನಡುವೆ ಪ್ರಶಾಂತ್ ಸಂಬರಗಿ ಅರುಣ್ ಸಾಗರ್ ಪರವಾಗಿ ಮಾತನಾಡಲು ಬಂದಾಗ ಪ್ರಶಾಂತ್ ಮತ್ತು ರೂಪೇಶ್ ನಡುವೆ ಮಾತಿನ ಚಕಮಕಿ ಕೈ ಮಿಲಾಯಿಸುವ ಹಂತಕ್ಕೆ ಹೋಯಿತು.

ಹಾಗಿದ್ದರೂ ಈ ವಾದ ಅಲ್ಲಿಗೇ ನಿಲ್ಲಲಿಲ್ಲ. ಇಂದಿನ ಸಂಚಿಕೆಯಲ್ಲೂ ಇವರ ವಾದ-ವಿವಾದ ಮುಂದುವರಿಯಲಿದೆ. ಇದೀಗ ನೆಟ್ಟಿಗರು ಕೆಲವರು ಅರುಣ್ ಸಾಗರ್ ಈ ರೀತಿ ಮಾತನಾಡಿದ್ದು ತಪ್ಪು ಎಂದರೆ, ಇನ್ನು ಕೆಲವರು ಸರಿಯಾಗಿ ಹೇಳಿದ್ದಾರೆ ಎಂದು ಸಮರ್ಥಿಸಿದ್ದಾರೆ.

-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ