ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರವಾಹಿ ಇದೀಗ ವೀಕ್ಷಕರಿಂದ ಭಾರೀ ಟೀಕೆಗೊಳಗಾಗಿದೆ. ಇದಕ್ಕೆ ಕಾರಣ ಮೊನ್ನೆಯ ಎಪಿಸೋಡ್ ನಲ್ಲಿ ಪ್ರಸಾರವಾದ ಒಂದು ದೃಶ್ಯ.
ಲಕ್ಷ್ಮೀ ನಿವಾಸ ಧಾರವಾಹಿ ಇತ್ತೀಚೆಗಷ್ಟೇ ಪ್ರಸಾರ ಆರಂಭಿಸಿದ ಧಾರವಾಹಿ. ಸ್ಯಾಂಡಲ್ ವುಡ್ ಹೀರೋಯಿನ್ ಶ್ವೇತಾ, ಹಿರಿಯ ನಟಿ ಲಕ್ಷ್ಮೀ, ಚಂದನಾ ಅನಂತಕೃಷ್ಣ, ದಿಶಾ ಮದನ್ ಮುಂತಾದವರು ನಟಿಸುತ್ತಿರುವ ಧಾರವಾಹಿ ಇದಾಗಿದೆ. ಮದುವೆ ದಿನವೇ ವರ ಸಾವನ್ನಪ್ಪಿದ ಬಳಿಕ ನಾಯಕಿ ಭಾವನಾ ವರನ ಮಗಳನ್ನೇ ತನ್ನ ಮಗುವೆಂದು ಸಾಕಲು ಹೊರಟಿದ್ದಳು. ಆದರೆ ಪೊಲೀಸರು ಮಧ‍್ಯಪ್ರವೇಶಿಸಿ ಮಗುವನ್ನು ಮರಳಿ ಆಕೆಯ ಸೋದರತ್ತೆಯ ಕೈಗೊಪ್ಪಿಸಿದರು. ಅತ್ತ ಅಪ್ಪ-ಅಮ್ಮನನ್ನು ಕಳೆದುಕೊಂಡಿರುವ ಮಗು ಈಗ ಸೋದರತ್ತೆಯ ಗಂಡನ ದಬ್ಬಾಳಿಕೆಗೊಳಗಾಗಿರುವ ಸನ್ನಿವೇಶ ಧಾರವಾಹಿಯಲ್ಲಿ ನಡೆಯುತ್ತಿದೆ.
ಐದಾರು ವರ್ಷದ ಪುಟ್ಟ ಮಗುವಿನ ಕೈಯಲ್ಲಿ ನೆಲ ಒರೆಸುವ ಕೆಲಸ ಮಾಡುವ ದೃಶ್ಯವೊಂದು ಮೊನ್ನೆ ಪ್ರಸಾರವಾಗಿತ್ತು. ಈ ದೃಶ್ಯದ ಬಗ್ಗೆ ವೀಕ್ಷಕರು ಆಕ್ಷೇಪವೆತ್ತಿದ್ದಾರೆ. ಚಿಕ್ಕ ಮಗುವಿನ ಕೈಯಲ್ಲಿ ಕೆಲಸ ಮಾಡಿಸುವಂತಹ ಕ್ರೌರ್ಯತೆಯನ್ನು ಯಾಕೆ ತೋರಿಸುತ್ತಿದ್ದೀರಿ? ಇದು ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಮ ಎಂದು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಕ್ಕಳನ್ನು ಧಾರವಾಹಿಯಲ್ಲಿ ಬಳಸುವಾಗ ಶೋಷಣೆಗೊಳಗಾದಂತೆ ನೋಡಿಕೊಳ್ಳಬೇಕು. ಆದರೆ ಧಾರವಾಹಿ ದೃಶ್ಯದ ಹೆಸರಿನಲ್ಲಿ ಇಂತಹ ಸನ್ನಿವೇಶವನ್ನು ತೋರಿಸುವ ಅಗತ್ಯವಿತ್ತೇ ಎಂದು ವೀಕ್ಷಕರು ಕಿಡಿ ಕಾರಿದ್ದಾರೆ. ಇದಕ್ಕೆ ಧಾರವಾಹಿ ತಂಡ ಯಾವ ರೀತಿ ಪ್ರತಿಕ್ರಿಯಿಸುತ್ತೋ ಕಾದು ನೋಡಬೇಕಿದೆ.
ಇತ್ತೀಚೆಗೆ ಸುವರ್ಣ ವಾಹಿನಿಯ ಧಾರವಾಹಿಯೊಂದು ಕಾಂತಾರ ಸಿನಿಮಾದಂತೆ ಕರಾವಳಿಯ ದೈವಗಳ ಬಗ್ಗೆ ದೃಶ್ಯ ಚಿತ್ರೀಕರಿಸಿ ವಿವಾದಕ್ಕೀಡಾಗಿತ್ತು. ಕೆಲವು ದಿನಗಳ ಮೊದಲು ಜೀ ಕನ್ನಡ ವಾಹಿನಿಯ ಭೂಮಿಗೆ ಬಂದ ಭಗವಂತ ಧಾರವಾಹಿ ಕನ್ನಡ ಹೋರಾಟಗಾರರಿಗೆ ಅವಮಾನ ಮಾಡಿದ ಅಪವಾದಕ್ಕೀಡಾಗಿತ್ತು.