ಬೆಂಗಳೂರು: ಯಾದಗಿರಿಯಲ್ಲಿ ನಡೆಯಬೇಕಿದ್ದ ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಗ್ರ್ಯಾಂಡ್ ಫಿನಾಲೆ ಕೊನೆಯ ಕ್ಷಣದಲ್ಲಿ ರದ್ದುಗೊಳಿಸಲಾಯಿತು. ಇದಕ್ಕೀಗ ನಾನಾ ಕಾಣಗಳು ಕೇಳಿಬಂದಿದೆ.
ಯಾದಗಿರಿಯಲ್ಲಿ ಮೊನ್ನೆ ನಡೆಯಬೇಕಿದ್ದ ಹಾಡಿನ ರಿಯಾಲಿಟಿ ಶೋ ಫೈನಲ್ ಕಾರ್ಯಕ್ರಮಕ್ಕೆ ಸಾವಿರಾರು ಜನ ಸೇರಿದ್ದರು. ಜೊತೆಗೆ ಅತಿಥಿಯಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಗಮಿಸುವವರಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಕಾರ್ಯಕ್ರಮ ರದ್ದಾಗಿರುವುದಾಗಿ ಜೀ ವಾಹಿನಿ ಪ್ರತಿನಿಧಿಗಳು ವೇದಿಕೆಯಲ್ಲಿ ಘೋಷಿಸಿದರು.
ಇದನ್ನು ಕೇಳಿ ಅಲ್ಲಿ ನೆರೆದಿದ್ದ ಸಾವಿರಾರು ಜನ ಹಿಡಿಶಾಪ ಹಾಕುತ್ತಾ ಅಲ್ಲಿಂದ ತೆರಳಿದರು. ಆದರೆ ಇದಕ್ಕೆ ಬಾಂಬ್ ಭಯವೇ ಕಾರಣ ಎಂಬ ಗುಸು ಗುಸು ಕೇಳಿಬಂದಿದೆ. ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ಸ್ಪೋಟ ನಡೆದಿದೆ. ಇದರ ಬೆನ್ನಲ್ಲೇ ಈಮೇಲ್ ಮೂಲಕವೂ ಬಾಂಬ್ ಬೆದರಿಕೆ ಬಂದಿತ್ತು.
ಇದರ ಬೆನ್ನಲ್ಲೇ ಗುಪ್ತಚರ ಇಲಾಖೆಯಿಂದ ಇಷ್ಟೊಂದು ಜನರನ್ನು ಸೇರಿಸಿಕೊಂಡು ಕಾರ್ಯಕ್ರಮ ಮಾಡದಂತೆ ಸೂಚನೆ ಬಂದ ಹಿನ್ನಲೆಯಲ್ಲೇ ಕಾರ್ಯಕ್ರಮ ರದ್ದುಗೊಳಿಸಲಾಯಿತು ಎಂದು ಕೇಳಿಬಂದಿದೆ. ಆದರೆ ಇದನ್ನು ವಾಹಿನಿ ಅಧಿಕೃತವಾಗಿ ಹೇಳಿಲ್ಲ. ಕೇವಲ ತಾಂತ್ರಿಕ ಕಾರಣ ಎಂದಷ್ಟೇ ಹೇಳಿತ್ತು. ಆದರೆ ಫೈನಲ್ ನೋಡಲು ಬಂದಿದ್ದ ಅಷ್ಟೊಂದು ಜನ ಕೊನೆಗೂ ಕಾರ್ಯಕ್ರಮ ನೋಡಲಾಗದೇ ಹಿಂತಿರುಗುವಂತಾಗಿದ್ದಕ್ಕೆ ಅಸಮಾಧಾನಗೊಂಡರು.