ಕರ್ನಾಟಕದಲ್ಲಿ 75% ಅರ್ಹ ಜನಸಂಖ್ಯೆಗೆ ಕನಿಷ್ಠ ಒಂದು ಡೋಸ್ ಲಸಿಕೆ ನೀಡಲಾಗಿದೆ; ಸುಧಾಕರ್

ಶನಿವಾರ, 18 ಸೆಪ್ಟಂಬರ್ 2021 (10:43 IST)
ಬೆಂಗಳೂರು, ಸೆ18 : ಕರ್ನಾಟಕದಲ್ಲಿ ಕೊರೊನಾ ಸೋಂಕಿನ ವಿರುದ್ಧ 75% ಅರ್ಹ ಜನಸಂಖ್ಯೆಗೆ ಕೊರೊನಾ ಲಸಿಕೆಯ ಮೊದಲ ಡೋಸ್ ನೀಡಿದ್ದು, 24% ಮಂದಿ ಎರಡೂ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ ಎಂದು ರಾಜ್ಯ ಆರೋಗ್ಯ ಸಚಿವ ಕೆ ಸುಧಾಕರ್ ಮಾಹಿತಿ ನೀಡಿದ್ದಾರೆ.

ಶುಕ್ರವಾರ ರಾತ್ರಿ 9 ಗಂಟೆವರೆಗೆ 26.92 ಲಕ್ಷ ಡೋಸ್ಗಳನ್ನು ನೀಡುವ ಮೂಲಕ ಲಸಿಕೆ ಅಭಿಯಾನದಲ್ಲಿ ಕರ್ನಾಟಕ ಅಗ್ರ ಸ್ಥಾನದಲ್ಲಿದೆ ಎಂದು ಘೋಷಣೆ ಮಾಡಿದ್ದಾರೆ. ಈ ಮೂಲಕ ಇದುವರೆಗೆ ರಾಜ್ಯದಲ್ಲಿ ಐದು ಕೋಟಿಗೂ ಅಧಿಕ ಡೋಸ್ ಲಸಿಕೆ ನೀಡುವ ಮೂಲಕ ಕರ್ನಾಟಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ ಎಂದು ಹೇಳಿದ್ದಾರೆ.
'ನಾವು ಇಂದು ಐದು ಕೋಟಿ ಲಸಿಕಾ ಗುರಿಯನ್ನು ತಲುಪಿದ್ದೇವೆ. ಎಲ್ಲಾ ಅರ್ಹ ಜನಸಂಖ್ಯೆಗೆ ಲಸಿಕೆ ಹಾಕಿದ ಭಾರತದ ಎರಡನೇ ಜಿಲ್ಲೆಯಾಗಿ ಬೆಂಗಳೂರು ಗುರುತಿಸಿಕೊಂಡಿದೆ' ಎಂದು ಶುಕ್ರವಾರ ಹೇಳಿದ್ದಾರೆ.
ರಾಜ್ಯ ಆರೋಗ್ಯ ಇಲಾಖೆ ಪ್ರಕಾರ, ಬಿಬಿಎಂಪಿ ವ್ಯಾಪ್ತಿಯಲ್ಲಿ 3.98 ಲಕ್ಷ ಡೋಸ್, ಬೆಳಗಾವಿ 2.39 ಲಕ್ಷ ಡೋಸ್, ದಕ್ಷಿಣ ಕನ್ನಡ 1.33 ಲಕ್ಷ ಡೋಸ್, ಬಳ್ಳಾರಿ 1.33 ಲಕ್ಷ ಡೋಸ್, ತುಮಕೂರು 1.24 ಲಕ್ಷ ಡೋಸ್ ಹಾಗೂ ಮಂಡ್ಯ 1.15 ಲಕ್ಷ ಡೋಸ್ ನೀಡಲಾಗಿದೆ.
ಬೆಂಗಳೂರು ನಗರ, ಶಿವಮೊಗ್ಗ, ಧಾರವಾಡ, ರಾಮನಗರ, ಹಾಸನ, ದಾವಣಗೆರೆ, ಚಿಕ್ಕಗಳೂರು ಹಾಗೂ ಹಾವೇರಿ ಜಿಲ್ಲೆಗಳು ದಿನದ 100 ಪ್ರತಿಶತಕ್ಕೂ ಹೆಚ್ಚು ಗುರಿ ತಲುಪಿವೆ. ರಾಜ್ಯಾದ್ಯಂತ 12 ಸಾವಿರ ಕೊರೊನಾ ಲಸಿಕೆ ಕೇಂದ್ರಗಳಲ್ಲಿ 'ಮೆಗಾ ಲಸಿಕಾ ಮೇಳ'ವನ್ನು ಆಯೋಜಿಸಿ ಶುಕ್ರವಾರ ಲಸಿಕೆ ನೀಡಲಾಗಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಶುಕ್ರವಾರ 4.10 ಲಕ್ಷ ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದ್ದು, ಮೆಟ್ರೋ ನಗರಗಳಲ್ಲಿ ದಿನವೊಂದರಲ್ಲೇ ಅತಿ ಹೆಚ್ಚು ಕೊರೊನಾ ಲಸಿಕೆ ನೀಡಿದ ನಗರವಾಗಿ ಬೆಂಗಳೂರು ಗುರುತಿಸಿಕೊಂಡಿತು. ಐದು ಲಕ್ಷ ಲಸಿಕೆ ನೀಡುವ ಗುರಿಯನ್ನು ಬಿಬಿಎಂಪಿ ಹೊಂದಿತ್ತು. ಇದರಲ್ಲಿ 84% ಗುರಿ ಸಾಧಿಸಿರುವುದಾಗಿ ತಿಳಿಸಿದೆ.
"ಕಳೆದ ಏಳು ತಿಂಗಳಿನಿಂದ ನಿರಂತರವಾಗಿ ಲಸಿಕೆ ವಿತರಣೆ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ವೈದ್ಯಕೀಯ ಸಿಬ್ಬಂದಿ ಮತ್ತು ಕಾರ್ಯಕರ್ತರಿಗೆ ಧನ್ಯವಾದಗಳು. ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಮಾರ್ಗದರ್ಶನ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೂ ಧನ್ಯವಾದಗಳು," ಎಂದು ಸುಧಾಕರ್ ಟ್ವೀಟ್ ಮಾಡಿದ್ದಾರೆ.
ಭಾರತವು ಕೊರೊನಾ ಲಸಿಕೆ ವಿತರಣೆಯಲ್ಲಿ ದೊಡ್ಡ ದಾಖಲೆ ಬರೆದಿದೆ. ಸೆಪ್ಟೆಂಬರ್ 17ರಂದು ದೇಶಾದ್ಯಂತ ಸಮರೋಪಾದಿಯಲ್ಲಿ ಲಸಿಕೆ ವಿತರಿಸಲಾಗಿದ್ದು, ಕೇವಲ ಒಂದೇ ಒಂದು ನಿಮಿಷದಲ್ಲಿ 34,299 ಡೋಸ್ ಲಸಿಕೆ ವಿತರಣೆ ಮಾಡಲಾಗಿದೆ ಎಂಬ ಅಂಶವನ್ನು ಉಲ್ಲೇಖಿಸಿದ್ದಾರೆ.
ಕರ್ನಾಟಕದಲ್ಲಿ ಕೊರೊನಾ ಸ್ಥಿತಿಗತಿ:
ಕರ್ನಾಟಕದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ಪ್ರತಿನಿತ್ಯ 1,000 ಗಡಿ ದಾಟುತ್ತಿದೆ. ರಾಜ್ಯದಲ್ಲಿ ಹೊಸ ಸೋಂಕಿತ ಪ್ರಕರಣಗಳ ಪ್ರಮಾಣ ಶೇ.0.67ರಷ್ಟಿದ್ದು, ಸಾವಿನ ಸಂಖ್ಯೆಯ ಶೇಕಡಾವಾರು ಪ್ರಮಾಣ 1.79ರಷ್ಟಿದೆ. ರಾಜ್ಯದಲ್ಲಿ ಶುಕ್ರವಾರ 1003 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 1199 ಸೋಂಕಿತರು ಗುಣಮುಖರಾಗಿದ್ದಾರೆ. 18 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದು, ಈವರೆಗೂ 37573 ಮಂದಿ ಸಾವನ್ನಪ್ಪಿದ್ದಾರೆ.
ಶುಕ್ರವಾರದ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 2966194ಕ್ಕೆ ಏರಿಕೆಯಾಗಿದೆ. ಒಟ್ಟು 2912633 ಸೋಂಕಿತರು ಗುಣಮುಖರಾಗಿದ್ದು. 15960 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ