ಮನೆಗೆ ನೀರು ನುಗ್ಗಿದರೆ 9 ಲಕ್ಷ ಪರಿಹಾರಕ್ಕೆ ಹೈಕೋರ್ಟ್ ಸೂಚನೆ

ಬುಧವಾರ, 7 ಸೆಪ್ಟಂಬರ್ 2022 (06:14 IST)
ನವದೆಹಲಿ : ಸರಿಯಾದ ಚರಂಡಿಗಳನ್ನು ನಿರ್ಮಿಸಿ, ಮಳೆ ನೀರು ನಿಲ್ಲದಂತೆ ನೋಡಿಕೊಳ್ಳುವುದು ಮುನ್ಸಿಪಲ್ ಕಾರ್ಪೊರೇಷನ್ನ ಕರ್ತವ್ಯ.

ಮಳೆ ನೀರು ಮನೆಗೆ ನುಗ್ಗಿ, ನಷ್ಟವಾದರೆ ಅದಕ್ಕೆ ಕಾರ್ಪೊರೇಷನ್ ಹೊಣೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ. 12 ವರ್ಷ ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಆದೇಶ ನೀಡಿದ ಕೋರ್ಟ್, ಅಧಿಕಾರಿಗಳ ವಿರುದ್ಧ ಚಾಟಿ ಬೀಸಿ 9 ಲಕ್ಷ ರೂ. ಪರಿಹಾರ ನೀಡುವಂತೆ ಸೂಚಿಸಿದೆ.

2010 ರಲ್ಲಿ ದೆಹಲಿಯಲ್ಲಿ ಸುರಿದ ಭಾರೀ ಮಳೆಯಿಂದ ಚರಂಡಿ ನೀರು ಮನೆಗೆ ನುಗ್ಗಿ ಅಪಾರ ನಷ್ಟವಾಗಿತ್ತು. ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳ ಕರ್ತವ್ಯ ಲೋಪ ಪ್ರಶ್ನಿಸಿ ಲೀಲಾ ಮಾಥುರ್ ಅವರು ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.

ಪಶ್ಚಿಮ ದೆಹಲಿಯಲ್ಲಿ ತಮ್ಮ ಮನೆ ನಿರ್ಮಿಸಿದಾಗ ಅದು ರಸ್ತೆಯ ಮಟ್ಟದಲ್ಲಿತ್ತು. ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಹಲವು ಬಾರಿ ರಸ್ತೆ ಪುನರ್ನಿರ್ಮಾಣದ ನಂತರ ರಸ್ತೆಯ ಮಟ್ಟವು ಏರಿ, ಮನೆ ತಗ್ಗು ಪ್ರದೇಶದಲ್ಲಿ ಉಳಿಯುವಂತೆ ಅಧಿಕಾರಿಗಳು ಮಾಡಿದ್ದಾರೆ.

ಇದರಿಂದ ಮಾನ್ಸೂನ್ ಮಳೆಯ ವೇಳೆ ಮನೆಗೆ ನೀರು ನುಗ್ಗಿದೆ. ಸಮಸ್ಯೆಯನ್ನು ಪರಿಹರಿಸಲು ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಗಮನ ಹರಿಸಲಿಲ್ಲ ಎಂದು ಅವರು ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ. 

ಎಂಸಿಡಿ ತನ್ನ ಕಾರ್ಯವೈಖರಿಯಲ್ಲಿ ತೀವ್ರ ನಿರ್ಲಕ್ಷ್ಯ ವಹಿಸಿರುವುದರಿಂದ, ಮೇಲ್ಮನವಿದಾರರಿಗೆ ಸಂಪೂರ್ಣ ನ್ಯಾಯ ಒದಗಿಸಬೇಕು. ಹೀಗಾಗಿ ಪರಿಹಾರ ಹಣವನ್ನು 3 ಲಕ್ಷದಿಂದ 9 ಲಕ್ಷ ರೂ.ಗೆ ಏರಿಸಬೇಕು ಎಂದು ಕೋರ್ಟ್ ಆದೇಶ ನೀಡಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ