ಕೋವಿಡ್ ಲಸಿಕೆ ಪಡೆದು ಅಸ್ವಸ್ಥಗೊಂಡ ಅಪ್ರಾಪ್ತ ಬಾಲಕ; ತನಿಖೆಗೆ ಆಗ್ರಹ
ಸೋಮವಾರ, 30 ಆಗಸ್ಟ್ 2021 (13:53 IST)
ಮಧ್ಯಪ್ರದೇಶ (ಆ. 30): ದೇಶದಲ್ಲಿ ಪ್ರಸ್ತುತ ಕೇವಲ 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ವಿತರಣೆ ಕಾರ್ಯಕ್ರಮ ನಡೆಯುತ್ತಿದೆ. ಮಕ್ಕಳ ಲಸಿಕೆ ಮುಂದಿನ ತಿಂಗಳ ಸೆಪ್ಟೆಂಬರ್ ಅಂತ್ಯ ಅಥವಾ ಅಕ್ಟೋಬರ್ನಲ್ಲಿ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಈ ನಡುವೆ ಅಪ್ರಾಪ್ತ ಯುವಕನಿಗೆ ಕೋವಿಡ್ ಲಸಿಕೆ ನೀಡಿದ ಪರಿಣಾಮ ಆತ ಅನಾರೋಗ್ಯಕ್ಕೆ ತುತ್ತಾಗಿದ್ದಾನೆ ಎಂಬ ವರದಿಯಾಗಿದೆ. ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಅಂಬಾ ತಹಸಿಲ್ನ ಬಾಗ್ ಕಾ ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 16 ವರ್ಷದ ಬಾಲಕ ಕೋವಿಡ್ ಲಸಿಕೆ ಪಡೆದ ಬಳಿಕ ಅಸ್ವಸ್ಥಗೊಂಡಿದ್ದಾನೆ ಎಂದು ತಿಳಿದು ಬಂದಿದೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಈ ಸಂಬಂಧ ತನಿಖೆ ನಡೆಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಆದೇಶಿಸಿದ್ದಾರೆ.
ಸರ್ಕಾರ ಇನ್ನು ಅಪ್ರಾಪ್ತ ಮಕ್ಕಳಿಗೆ ಲಸಿಕೆ ನೀಡುವಿಕೆ ಕಾರ್ಯಕ್ಕೆ ಚಾಲನೆ ನೀಡಿಲ್ಲ. ಈ ನಡುವೆ ಹೇಗೆ ಅಪ್ತಾಪ್ತ ಬಾಲಕನಿಗೆ ಲಸಿಕೆ ನೀಡಲಾಗಿದೆ ಎಂಬುದರ ಕುರಿತು ತನಿಖೆ ನಡೆಸಲಾಗುವುದು ಎಂದು ಹಿರಿಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಕಮಲೇಶ್ ಕುಶ್ವಾಹಾ ಅವರ ಮಗ 16 ವರ್ಷದ ಮಗ ಪಿಲ್ಲು ಲಸಿಕೆ ಪಡೆದ ಬಾಲಕ. ಇಲ್ಲಿನ ಮೊರೆನಾ ಜಿಲ್ಲಾ ಕೇಂದ್ರದಿಂದ ಸುಮಾರು 35 ಕಿಮೀ ದೂರದ ಲಸಿಕಾ ಕೇಂದ್ರದಲ್ಲಿ ಈತ ಲಸಿಕೆ ಪಡೆದಿದ್ದಾನೆ. ಲಸಿಕೆ ಪಡೆಯುತ್ತಿದ್ದಂತೆ ಆತ ತಲೆ ಸುತ್ತಿ ಬಿದ್ದಿದ್ದಾನೆ. ಈ ವೇಳೆ ಆತನ ಬಾಯಲ್ಲಿ ನೊರೆ ಕೂಡ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಅಸ್ವಸ್ಥಗೊಂಡ ಬಾಲಕನನ್ನು ಗ್ವಾಲಿಯರ್ ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಸೂಚಿಸಿದರು. ಲಸಿಕೆ ಪಡೆಯುತ್ತಿದ್ದಂತೆ ಬಾಲಕ ಜ್ಞಾನ ತಪ್ಪಿದಾಗ ಆತನ ಪೋಷಕರು ಕೇಂದ್ರದಲ್ಲಿ ದೊಡ್ಡ ಹೈಡ್ರಾಮ ನಡೆಸಿದರು. ಆದರೆ ಬಾಲಕ ಗ್ವಾಲಿಯರ್ ಆಸ್ಪತ್ರೆಗೆ ದಾಖಲಾಗುವ ಬದಲು ನೇರವಾಗಿ ಮನೆಗೆ ಹೋಗಿದ್ದಾನೆ ಎಂದು ತಿಳಿದು ಬಂದಿದೆ ಎಂದು ಮೊರೆನಾ ಜಿಲ್ಲಾ ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ.
ನಾವು ಇಂದು ಅವರ ಮನೆಗೆ ವೈದ್ಯರ ತಂಡವನ್ನು ಕಳುಹಿಸಿದ್ದು, ಪಿಲ್ಲು ಆರೋಗ್ಯ ಕುರಿತು ಮಾಹಿತಿ ಪಡೆದಿದ್ದಾವೆ. ಅಪ್ರಾಪ್ತ ಬಾಲಕ ಹೇಗೆ ಕೋವಿಡ್ ಲಸಿಕೆ ಪಡೆದ ಕುರಿತು ತನಿಖೆ ನಡೆಸಲಾಗುತ್ತಿದೆ. ಪಿಲ್ಲು ಆಧಾರ್ ಕಾರ್ಡ್ ಅನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಭಾರತದಲ್ಲಿ ಮಕ್ಕಳಿಗೆ ಮೊದಲ ಲಸಿಕೆ ಲಭ್ಯವಾಗಿದೆ. ಝೈಡಸ್ ಕ್ಯಾಡಿಲಾ ಅವರ ಪ್ಲಾಸ್ಮಾ ಲಸಿಕೆಗೆ ಅನುಮೋದನೆ ಸಿಕ್ಕಿದ್ದು, 12 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡಬಹುದಾಗಿದೆ. ಭಾರತದಲ್ಲಿ ಝೈಡಸ್ ಕ್ಯಾಡಿಲಾ ಲಸಿಕೆ ತುರ್ತು ಬಳಕೆಗೆ ಡಿಸಿಜಿಐ ಅನುಮತಿ ನೀಡಿದೆ. ಭಾರತೀಯ ಔಷಧ ನಿಯಂತ್ರಕ (DCGI) ಝೈಡಸ್ ಕ್ಯಾಡಿಲಾ ಅವರ ಮೂರು ಡೋಸ್ಗಳ ಡಿಎನ್ಎ ಲಸಿಕೆಯನ್ನು 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ತುರ್ತು ಬಳಕೆಗಾಗಿ ಅನುಮೋದಿಸಿದೆ. ಈ ಲಸಿಕೆ ಸೆಪ್ಟೆಂಬರ್ ಅಂತ್ಯದ ವೇಳೆಗೆ ಇಲ್ಲ ಅಕ್ಟೋಬರ್ನಲ್ಲಿ ಮಕ್ಕಳಿಗೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.