ವರಿಷ್ಠರ ಭೇಟಿಗೆ ನಾಳೆ ಸಿಎಂ ಬಿಎಸ್ವೈ ದಿಲ್ಲಿಗೆ!

ಗುರುವಾರ, 15 ಜುಲೈ 2021 (08:01 IST)
ಬೆಂಗಳೂರು(ಜು.15): ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶುಕ್ರವಾರ ದೆಹಲಿಗೆ ತೆರಳಲಿದ್ದು, ಅದೇ ದಿನ ರಾತ್ರಿ ಅಥವಾ ಶನಿವಾರ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪಕ್ಷದ ವರಿಷ್ಠರನ್ನು ಭೇಟಿ ಮಾಡುವ ಉದ್ದೇಶ ಹೊಂದಿದ್ದಾರೆ.


ಇದೇ ತಿಂಗಳ 26ರಂದು ಯಡಿಯೂರಪ್ಪ ನೇತೃತ್ವದ ಸರ್ಕಾರ ಎರಡು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಭೇಟಿ ತೀವ್ರ ಕುತೂಹಲ ಮೂಡಿಸಿದ್ದು, ಸಂಪುಟ ಪುನಾರಚನೆ ಅಥವಾ ಸಂಪುಟ ವಿಸ್ತರಣೆ ಸೇರಿದಂತೆ ಆಡಳಿತ ವ್ಯವಸ್ಥೆಯಲ್ಲಿ ಒಂದಿಷ್ಟುಬದಲಾವಣೆ ತರುವ ಬಗ್ಗೆ ವರಿಷ್ಠರ ಜೊತೆ ಸಮಾಲೋಚನೆ ನಡೆಸುವ ಸಂಭವ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.
* ಜು.26ಕ್ಕೆ ಸರ್ಕಾರಕ್ಕೆ 2 ವರ್ಷ: ಸಂಪುಟ ವಿಸ್ತರಣೆ/ಪುನಾರಚನೆ ಬಗ್ಗೆ ಚರ್ಚೆ?
* ವರಿಷ್ಠರ ಭೇಟಿಗೆ ನಾಳೆ ಸಿಎಂ ದಿಲ್ಲಿಗೆ
* ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ನಡ್ಡಾ ಭೇಟಿಗೆ ಸಮಯ ಕೇಳಿರುವ ಬಿಎಸ್ವೈ

ಕೋವಿಡ್ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ದೆಹಲಿಗೆ ಭೇಟಿ ನೀಡದೆ ಹೆಚ್ಚೂ ಕಡಿಮೆ ವರ್ಷ ಸಮೀಪಿಸಿದೆ. ಒಂದ್ಥೆರಡು ಅನಿವಾರ್ಯ ಸಂದರ್ಭಗಳಲ್ಲಿ ತಮ್ಮ ಪರವಾಗಿ ಸಚಿವರನ್ನು ಕಳುಹಿಸಿದ್ದನ್ನು ಬಿಟ್ಟರೆ ಬಹುತೇಕ ವೀಡಿಯೋ ಸಂವಾದ ಹಾಗೂ ದೂರವಾಣಿ ಮೂಲಕ ಪಕ್ಷದ ವರಿಷ್ಠರು ಹಾಗೂ ಕೇಂದ್ರದ ವಿವಿಧ ಸಚಿವರೊಂದಿಗೆ ಚರ್ಚೆ ನಡೆಸಿದ್ದರು.
ಆದರೆ, ಇದೀಗ ತಾವೇ ಖುದ್ದಾಗಿ ದೆಹಲಿಗೆ ತೆರಳಲು ನಿರ್ಧರಿಸಿರುವುದರಿಂದ ಸಹಜವಾಗಿಯೇ ಪ್ರಮುಖ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸುವುದು ನಿಶ್ಚಿತವಾಗಿದೆ. ಈಗಾಗಲೇ ಭೇಟಿಗೆ ಅವಕಾಶ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಕೋರಿದ್ದಾರೆ. ಈ ಬಗ್ಗೆ ಗುರುವಾರ ಸ್ಪಷ್ಟಚಿತ್ರಣ ಹೊರಬೀಳಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲು ಕೋರಿದ್ದರ ಬಗ್ಗೆ ಇನ್ನೂ ಖಚಿತ ಮಾಹಿತಿ ಲಭ್ಯವಾಗಿಲ್ಲ.
ನಾಯಕತ್ವ ಬದಲಾವಣೆ ಕುರಿತಂತೆ ತಮ್ಮ ವಿರುದ್ಧ ಪಕ್ಷದ ಕೆಲವು ಮುಖಂಡರು ಸತತವಾಗಿ ವಾಗ್ದಾಳಿ ನಡೆಸುತ್ತಿದ್ದರೂ ಅದಕ್ಕೆ ಪ್ರತಿಕ್ರಿಯಿಸದೆ ವರಿಷ್ಠರು ಸೂಚಿಸಿದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದ್ದರು. ಆದಾದ ಬಳಿಕ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ರಾಜ್ಯಕ್ಕೆ ಆಗಮಿಸಿ ಶಾಸಕರ ಅಭಿಪ್ರಾಯವನ್ನೂ ಸಂಗ್ರಹಿಸಿದ್ದರು. ಜೊತೆಗೆ ನಾಯಕತ್ವದಲ್ಲಿ ಯಾವುದೇ ಬದಲಾವಣೆಯಿಲ್ಲ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅವಧಿ ಪೂರ್ಣಗೊಳಿಸಲಿದ್ದಾರೆ ಎಂದು ಸ್ಪಷ್ಟವಾಗಿ ತಿಳಿಸಿದ್ದರು. ಇದೆಲ್ಲ ಮುಗಿದ ಬಳಿಕ ಯಡಿಯೂರಪ್ಪ ಅವರು ದೆಹಲಿಗೆ ಪ್ರಯಾಣ ಬೆಳೆಸುತ್ತಿರುವುದು ಬಿಜೆಪಿ ಪಾಳೆಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ