3ನೇ ಅಲೆಗೆ ಜನರಿಂದಲೇ ಆಹ್ವಾನ: ಮೋದಿ ಕಳವಳ!

ಬುಧವಾರ, 14 ಜುಲೈ 2021 (09:00 IST)
ನವದೆಹಲಿ(ಜು.14): ದೇಶಾದ್ಯಂತ ಅನ್ಲಾಕ್ ಘೋಷಣೆಯಾಗುತ್ತಲೇ ಜನರು ಭಾರೀ ಪ್ರಮಾಣದಲ್ಲಿ ಪ್ರವಾಸಿ ತಾಣಗಳು ಮತ್ತು ಮಾರುಕಟ್ಟೆಗಳಿಗೆ ಕೋವಿಡ್ ಮಾರ್ಗಸೂಚಿ ಪಾಲಿಸದೆ ಲಗ್ಗೆ ಇಡುತ್ತಿರುವುದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ‘ಇಂಥ ನಡತೆಯು 3ನೇ ಅಲೆಗೆ ಆಹ್ವಾನವಾಗಿದ್ದು, ಮೂರನೇ ಅಲೆಯನ್ನು ತಡೆಯಬೇಕಾದರೆ ನಾವೆಲ್ಲರೂ ಒಂದಾಗಿ ಶ್ರಮಿಸಲೇಬೇಕು’ ಎಂದು ಕರೆ ನೀಡಿದ್ದಾರೆ.


* ಮಾಸ್ಕ್, ಅಂತರವಿಲ್ಲದೆ ಮಾರುಕಟ್ಟೆ, ಪ್ರವಾಸಿ ತಾಣಕ್ಕೆ ಹೋಗುತ್ತಿರುವುದು ಸರಿಯಲ್ಲ

* ಈಶಾನ್ಯ ರಾಜ್ಯಗಳ 8 ಸಿಎಂಗಳ ಜತೆಗಿನ ಸಂವಾದದ ವೇಳೆ ಪ್ರಧಾನಿ ಅತೀವ ಬೇಸರ
* ಕೇರಳ, ಮಹಾರಾಷ್ಟ್ರ ಸೇರಿ 5 ರಾಜ್ಯಗಳಲ್ಲೇ ದೇಶದ ಶೇ.73 ಕೇಸ್: ಕೇಂದ್ರ ಸರ್ಕಾರ
* 3ನೇ ಅಲೆಗೆ ಜನರಿಂದಲೇ ಆಹ್ವಾನ: ಮೋದಿ ಕಳವಳ

ಇದೇ ವೇಳೆ, ಕೇಂದ್ರ ಆರೋಗ್ಯ ಸಚಿವಾಲಯ ಕೂಡ ಇದೇ ಕಳವಳ ಪ್ರಕಟಿಸಿದೆ. ‘ಕೊರೋನಾ 3ನೇ ಅಲೆ ಮುನ್ಸೂಚನೆಯನ್ನು ಜನರು ಕೇವಲ ‘ಹವಾಮಾನ ವರದಿ ಮುನ್ಸೂಚನೆ’ಯಂತೆ ಭಾವಿಸಿದ್ದಾರೆ. ಮಾರುಕಟ್ಟೆ, ಹಲವು ಪ್ರವಾಸಿ ತಾಣಗಳಲ್ಲಿ ದೃಶ್ಯ ನೋಡಿದರೆ ಕೋವಿಡ್ ಸನ್ನಡತೆಯನ್ನು ಮೀರಿ ನಡೆಯುತ್ತಿರುವುದು ಸಾಬೀತಾಗುತ್ತದೆ. ಇದರಿಂದಾಗಿ ಎರಡೂ ಅಲೆಗಳನ್ನು ಹತ್ತಿಕ್ಕಿದ ಭಾರತದ ಯತ್ನ ನಿಷ್ಫಲಗೊಳ್ಳಬಹುದು. ವಿಶ್ವದ ಅನೇಕ ದೇಶಗಳು ಈಗಾಗಲೇ 3ನೇ ಅಲೆ ಅನುಭವಿಸುತ್ತಿದ್ದು, ಅದನ್ನು ಭಾರತಕ್ಕೆ ಅಪ್ಪಳಿಸುವಂತೆ ಮಾಡಬೇಡಿ’ ಎಂದು ಕೋರಿದೆ.
‘ಕೇರಳ, ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ಒಡಿಶಾಗಳು ಜುಲೈನಲ್ಲಿ ದಾಖಲಾದ ಪ್ರಕರಣಗಳ ಶೇ.73ಷ್ಟುಪಾಲು ಹೊಂದಿವೆ. ಇದನ್ನು ನಿಯಂತ್ರಿಸಬೇಕೆಂದರೆ ಎಲ್ಲರೂ ಜಾಗೃತರಾಗಿರಬೇಕು’ ಎಂದು ಹೇಳಿದೆ.
ಮೋದಿ ಕಳವಳ:
ಈಶಾನ್ಯದ 8 ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮಂಗಳವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆ ನಡೆಸಿದ ಪ್ರಧಾನಿ ಮೋದಿ ‘ಕೊರೋನಾದಿಂದಾಗಿ ಪ್ರವಾಸೋದ್ಯಮ ಮತ್ತು ಉದ್ಯಮಕ್ಕೆ ಭಾರೀ ನಷ್ಟಉಂಟಾಗಿದೆ ಎಂಬುದು ನಿಜ. ಆದರೆ ನಾನು ಮತ್ತೊಮ್ಮೆ ಒತ್ತು ಕೊಟ್ಟು ಹೇಳುತ್ತಿದ್ದೇನೆ, ಹೀಗೆ ಮಾಸ್ಕ್ ಧರಿಸದೆ ಮಾರುಕಟ್ಟೆಮತ್ತು ಪ್ರವಾಸಿ ತಾಣಗಳಿಗೆ ದೊಡ್ಡ ಮಟ್ಟದಲ್ಲಿ ತೆರಳುವುದು ಸರಿಯಲ್ಲ. ಮೂರನೇ ಅಲೆಯನ್ನು ತಡೆಯಬೇಕಾದರೆ ನಾವೆಲ್ಲರೂ ಒಂದಾಗಿ ಶ್ರಮಿಸಲೇಬೇಕು’ ಎಂದು ಕರೆ ಕೊಟ್ಟರು.
‘ಈಶಾನ್ಯ ರಾಜ್ಯಗಳ ಹಲವು ಜಿಲ್ಲೆಗಳಲ್ಲಿ ಕೋವಿಡ್ ಪರಿಸ್ಥಿತಿ ಗಂಭೀರವಾಗಿದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಸೋಂಕು, ಸಾವು ಇಳಿಮುಖವಾಗುತ್ತಿದೆ. ಆದರೆ ಈಶಾನ್ಯ ರಾಜ್ಯಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ, ಇಲ್ಲವೇ ಇಳಿಮುಖದ ಹಾದಿಗೆ ಇನ್ನೂ ಬಂದಿಲ್ಲ. ಇದು ಕಳವಳದ ವಿಷಯ. ಹೀಗಾಗಿ ಈ ರಾಜ್ಯಗಳ ಮುಖ್ಯಮಂತ್ರಿಗಳು ಇನ್ನಷ್ಟುಎಚ್ಚರ ವಹಿಸುವ ಮೂಲಕ ಸೋಂಕು ನಿಯಂತ್ರಣಕ್ಕೆ ಯತ್ನಿಸಬೇಕು. ಮೈಕ್ರೋ ಕಂಟೈನ್ಮೆಂಟ್ಗೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ಸಲಹೆ ನೀಡಿದರು.
ರೂಪಾಂತರಿ ಬಗ್ಗೆ ಜಾಗ್ರತೆ ಅಗತ್ಯ:
ಇದೇ ವೇಳೆ ‘ಕೊರೋನಾ ವೈರಸ್ನ ಪ್ರತಿಯೊಂದು ರೂಪಾಂತರಿ ಬಗ್ಗೆಯೂ ನಾವು ಕಣ್ಣಿಡಬೇಕು. ರೂಪಾಂತರಗೊಂಡ ಬಳಿಕ ವೈರಸ್ ಹೇಗೆ ವರ್ತಿಸುತ್ತದೆ ಎಂಬುದರ ಬಗ್ಗೆ ತಜ್ಞರು ವಿಶ್ಲೇಷಣೆ ನಡೆಸುತ್ತಲೇ ಇದ್ದಾರೆ. ಆದರೆ ಇಂಥ ಸಂದರ್ಭದಲ್ಲಿ ಸೋಂಕು ತಗುಲದಂತೆ ಮುಂಜಾಗ್ರತೆ ವಹಿಸುವುದು ಮತ್ತು ಚಿಕಿತ್ಸೆ ಪಡೆಯುವುದು ಅತ್ಯಂತ ಮಹತ್ವದ್ದು. ಎಂದರು.
ಇದೇ ವೇಳೆ ಪರೀಕ್ಷೆ ಮತ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ನಾವು ಇನ್ನಷ್ಟುಮುಂದೆ ಸಾಗಬೇಕಿದೆ. ಇದಕ್ಕಾಗಿ ಇತ್ತೀಚೆಗೆ ಕೇಂದ್ರ ಸಚಿವ ಸಂಪುಟವು 23000 ಕೋಟಿ ರು.ಗಳ ಪ್ಯಾಕೇಜ್ ಘೋಷಿಸಿದೆ. ಈಶಾನ್ಯದ ಪ್ರತಿ ರಾಜ್ಯಗಳೂ ಈ ನೆರವನ್ನು ಬಳಸಿಕೊಂಡು ಆರೋಗ್ಯ ಕ್ಷೇತ್ರದ ಮೂಲಸೌಕರ್ಯವನ್ನು ಇನ್ನಷ್ಟುಬಲಗೊಳಿಸಬೇಕು ಎಂದು ಕರೆಕೊಟ್ಟರು.
ಸಭೆಯಲ್ಲಿ ಅಸ್ಸಾಂ, ನಾಗಾಲ್ಯಾಂಡ್, ತ್ರಿಪುರಾ, ಸಿಕ್ಕಿಂ, ಮಣಿಪುರ, ಮೇಘಾಲಯ, ಅರುಣಾಚಲಪ್ರದೇಶ ಮತ್ತು ಮಿಜೋರಂ ರಾಜ್ಯಗಳ ಮುಖ್ಯಮಂತ್ರಿಗಳು ಭಾಗಿಯಾಗಿದ್ದರು. ಇನ್ನು ಮೋದಿ ಜೊತೆಗೆ ಕೇಂದ್ರ ಗ್ಥೃಹ ಸಚಿವ ಅಮಿತ್ ಶಾ, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಉಪಸ್ಥಿತರಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ