ಕರೆಂಟ್ ಶಾಕ್ : ಅಕ್ಟೋಬರ್ನಿಂದ 43 ಪೈಸೆ ಏರಿಕೆ

ಶನಿವಾರ, 24 ಸೆಪ್ಟಂಬರ್ 2022 (10:36 IST)
ಬೆಂಗಳೂರು : ಕಲ್ಲಿದ್ದಲು ಖರೀದಿ ದರ ಹೆಚ್ಚಳವಾದ ಹಿನ್ನೆಲೆಯಲ್ಲಿ ಇಂಧನ ಹೊಂದಾಣಿಕೆ ಶುಲ್ಕವನ್ನು ಅಕ್ಟೋಬರ್ನಿಂದ ಅನ್ವಯವಾಗುವಂತೆ ಮುಂದಿನ 6 ತಿಂಗಳ ಅವಧಿಗೆ ಪರಿಷ್ಕರಿಸಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಆದೇಶ ಹೊರಡಿಸಿದೆ.

ಕೆಇಆರ್ಸಿ, 2022ರ ಸೆಪ್ಟೆಂಬರ್ 19 ರಂದು ಹೊರಡಿಸಿದ ಆದೇಶದನ್ವಯ ಇಂಧನ ಹೊಂದಾಣಿಕೆ ಶುಲ್ಕ 43 ಪೈಸೆಯನ್ನು ಮುಂದಿನ 6 ತಿಂಗಳ ಅವಧಿಗೆ ಗ್ರಾಹಕರಿಂದ ಸಂಗ್ರಹಿಸಲು ಬೆಸ್ಕಾಂಗೆ ಅನುಮತಿ ನೀಡಿದೆ.

ಕೆಇಆರ್ಸಿ ಇಂಧನ ವೆಚ್ಚ ಹೊಂದಾಣಿಕೆ ಶುಲ್ಕಗಳು ನಿಯಮಗಳು, 2013 ರ ಅನ್ವಯ ಇಂಧನ ಹೊಂದಾಣಿಕೆ ಶುಲ್ಕವನ್ನು 43 ಪೈಸೆ ಹೆಚ್ಚಳ ಮಾಡಿ ಬೆಸ್ಕಾಂಗೆ ಅನ್ವಯ ಆಗುವಂತೆ ಪರಿಷ್ಕರಿಸಲಾಗಿದೆ ಎಂದು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ಕೇಂದ್ರ ವಿದ್ಯುಚ್ಛಕ್ತಿ ಉತ್ಪಾದನಾ ಕೇಂದ್ರ, ಕರ್ನಾಟಕ ವಿದ್ಯುಚ್ಛಕ್ತಿ ಉತ್ಪಾದನಾ ಕೇಂದ್ರ ಮತ್ತು ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್ ನಿಂದ ಎಲ್ಲಾ ಎಸ್ಕಾಂಗಳು ವಿದ್ಯುತ್ ಖರೀದಿಸುತ್ತಿವೆ.

ಏಪ್ರಿಲ್-2022 ರಿಂದ ಜೂನ್-2022 ರವರೆಗೆ 643 ಕೋಟಿ ರೂ.ಗಳಷ್ಟು ವಿದ್ಯುತ್ ಖರೀದಿ ವೆಚ್ಚ ಹೆಚ್ಚಳವಾಗಿದ್ದು, 80 ಪೈಸೆ ಇಂಧನ ವೆಚ್ಚ ಹೊಂದಾಣಿಕೆ ಶುಲ್ಕವನ್ನು ವಸೂಲಿ ಮಾಡಲು ಬೆಸ್ಕಾಂ ಕೆಇಆರ್ಸಿಗೆ 2022ರ ಆಗಸ್ಟ್ 30 ರಂದು ಅರ್ಜಿ ಸಲ್ಲಿಸಿತ್ತು. ಪ್ರತಿ ಮೂರು ತಿಂಗಳಿಗೊಮ್ಮೆ ಇಂಧನ ಹೊಂದಾಣಿಕೆ ಶುಲ್ಕವನ್ನು ಪರಿಷ್ಕರಿಸಲಾಗುತ್ತದೆ.

ಆದರೆ ಗ್ರಾಹಕರಿಗೆ ಹೆಚ್ಚವರಿ ಹೊರೆಯನ್ನು ತಪ್ಪಿಸುವ ಉದ್ದೇಶದಿಂದ ಈ ಶುಲ್ಕವನ್ನು ಆರು ತಿಂಗಳಿಗೆ ಅನ್ವಯಿಸುವಂತೆ ಪರಿಷ್ಕರಿಸಲಾಗಿದೆ ಎಂದು ಬೆಸ್ಕಾಂ ಎಂ.ಡಿ ತಿಳಿಸಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ