ಬೆಂಗಳೂರು : ಎಸ್ಎಸ್ಎಲ್ಸಿ ಮತ್ತು ಪಿಯು ಮಂಡಳಿ ವಿಲೀನಕ್ಕೆ ಸರ್ಕಾರ ನಿರ್ಧಾರ ಕೈಗೊಂಡಿದ್ದು, ವಿದೇಯಕ ಮಂಡನೆಗೆ ಸೋಮವಾರ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ.
ಎರಡೂ ಮಂಡಳಿಗಳನ್ನು ಒಂದೇ ಮಂಡಳಿ ಮಾಡಲು ಸರ್ಕಾರ ನಿರ್ಧರಿಸಿದೆ. ಇಂದು ಅಥವಾ ನಾಳೆ ಸದನದಲ್ಲಿ ವಿಧೇಯಕ ಮಂಡಿಸಿ ಅನುಮೋದನೆ ಪಡೆಯುವ ಸಾಧ್ಯತೆ ಇದೆ.
ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಕಾಯ್ದೆ 1966 ತಿದ್ದುಪಡಿ ಮಸೂದೆಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದ್ದು, ಎನ್ಇಪಿ 2020 ಅನ್ವಯ ಬೋರ್ಡ್ ವಿಲೀನಕ್ಕೆ ಸರ್ಕಾರ ನಿರ್ಧಾರ ಮಾಡಿದೆ.
ಪಿಯುಸಿ ಪರೀಕ್ಷೆಗೆ ಪ್ರತ್ಯೇಕ ನಿರ್ದೇಶಕರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು ಇರಲಿದ್ದಾರೆ. ಪ್ರಶ್ನೆಪತ್ರಿಕೆ ಸಿದ್ಧತೆ, ವಿತರಣೆ, ರಹಸ್ಯ ಕಾಪಾಡುವ ವಿಶೇಷ ಅಧಿಕಾರ ಆಯಾ ಪರೀಕ್ಷೆಗಳ ನಿರ್ದೇಶಕರಿಗೆ ಇರಲಿದೆ.
ನೂತನ ಬೋರ್ಡ್ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡುವುದು, ಪರೀಕ್ಷೆ ಜೊತೆ ಶಾಲಾ-ಕಾಲೇಜುಗಳ ಶೈಕ್ಷಣಿಕ ಗುಣಮಟ್ಟ ಪರಿಶೀಲನೆ, ಶಾಲಾ-ಕಾಲೇಜುಗಳಿಗೆ ಗುಣಮಟ್ಟದ ಪರಿಶೀಲನೆ ಮಾಡಿ ಗ್ರೇಡ್ ನೀಡುವುದು, ವಿವಿ, ಪದವಿ ಕಾಲೇಜುಗಳಿಗೆ “ನ್ಯಾಕ್” ಸಂಸ್ಥೆ ನೀಡುವ ಮಾದರಿ ಗ್ರೇಡ್ ನೀಡಲಾಗುವುದು.