ಬೆಂಗಳೂರು : ರಾಜ್ಯದಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಹಂಪಿ ಉತ್ಸವ ಮುಂದಿನ ವರ್ಷ ಜನವರಿ ಅಥವಾ ಫೆಬ್ರವರಿಯಲ್ಲಿ ನಡೆಸಲು ತೀರ್ಮಾನ ಮಾಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ರಾಜ್ಯದಲ್ಲಿ ವಿಜಯನಗರ-ಬಳ್ಳಾರಿ ಸೇರಿದಂತೆ ಬಹುತೇಕ ಜಿಲ್ಲೆಗಳ ಹೆಚ್ಚಿನ ಸಂಖ್ಯೆಯ ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ. ಹೀಗಾಗಿ ಇಂತಹ ಸ್ಥಿತಿಯಲ್ಲಿ ಉತ್ಸವ ನಡೆಸುವುದು ಕಷ್ಟ. ಫೆಬ್ರವರಿ ವೇಳೆಗೆ ಪರಿಸ್ಥಿತಿ ನೋಡಿಕೊಂಡು ಉತ್ಸವ ಮಾಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಈ ಮುಂಚೆ ನವೆಂಬರ್ನಲ್ಲಿ ಉತ್ಸವ ನಡೆಸಲು ನಿರ್ಧಾರ ಮಾಡಲಾಗಿತ್ತು. ಆದರೆ ಬರ ಪರಿಸ್ಥಿತಿಯಿಂದಾಗಿ ಮುಖ್ಯಮಂತ್ರಿ ಅವರು ಫೆಬ್ರವರಿಯಲ್ಲಿ ನಡೆಸಿ ಎಂದು ಸಲಹೆ ನೀಡಿದ್ದು, ಫೆಬ್ರವರಿಯಲ್ಲಿ ನಡೆಸಲು ತೀರ್ಮಾನ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.