ರಾಷ್ಟ್ರಪತಿ ಚುನಾವಣೆಗೆ : ಯಾರು ಸ್ಪರ್ಧಿಸಬಹುದು?

ಸೋಮವಾರ, 13 ಜೂನ್ 2022 (13:14 IST)
ದೇಶದ 14ನೇ ರಾಷ್ಟ್ರಪತಿಯಾಗಿರುವ ರಾಮನಾಥ ಕೋವಿಂದ್ ಅವರ ಅವಧಿ ಇನ್ನು ಒಂದೂವರೆ ತಿಂಗಳಿನಲ್ಲಿ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ನೂತನ ರಾಷ್ಟ್ರಪತಿ ಆಯ್ಕೆಗೆ ಕೇಂದ್ರ ಚುನಾವಣಾ ಆಯೋಗ ಗುರುವಾರ ವೇಳಾಪಟ್ಟಿಪ್ರಕಟಿಸಿದೆ.
 
ಜು.18ರಂದು ಚುನಾವಣೆ ನಡೆಯಲಿದ್ದು, ಜು.21ರಂದು ಮತಗಳ ಎಣಿಕೆ ಕಾರ್ಯ ನಡೆಯಲಿದೆ ಎಂದು ಆಯೋಗ ತಿಳಿಸಿದೆ. 2017ರಲ್ಲಿ ರಾಷ್ಟ್ರಪತಿಯಾಗಿ ಚುನಾಯಿತರಾಗಿದ್ದ ಕೋವಿಂದ್ ಅವರ ಅವಧಿ ಜು.24ಕ್ಕೆ ಮುಗಿಯಲಿದೆ. ಹೀಗಾಗಿ ಜು.25ರೊಳಗೆ ನೂತನ ರಾಷ್ಟ್ರಪತಿ ಪ್ರಮಾಣವಚನ ಸ್ವೀಕರಿಸಬೇಕಾಗಿದೆ.

ಲೋಕಸಭೆ, ರಾಜ್ಯಸಭೆ ಮತ್ತು ರಾಜ್ಯಗಳ ವಿಧಾನಸಭೆಯಲ್ಲಿ ಅತ್ಯಧಿಕ ಬೆಂಬಲ ಹೊಂದಿರುವ ಬಿಜೆಪಿ, ತನ್ನದೇ ಅಭ್ಯರ್ಥಿಯನ್ನು ರಾಷ್ಟ್ರಪತಿಯಾಗಿ ಆರಿಸಲು ಬೇಕಾದ ಸಂಖ್ಯಾಬಲವನ್ನು ಹೊಂದಿದೆ.

ಇದಲ್ಲದೆ, ಒಡಿಶಾದ ಬಿಜು ಜನತಾ ದಳ ಹಾಗೂ ಆಂಧ್ರಪ್ರದೇಶದ ವೈಎಸ್ಸಾರ್ ಕಾಂಗ್ರೆಸ್ ಬೆಂಬಲ ಕೂಡ ಲಭಿಸುವ ನಿರೀಕ್ಷೆ ಇದೆ. ಹೀಗಾಗಿ ಬಿಜೆಪಿ ನೇತೃತ್ವದ ಎನ್ಡಿಎಯಿಂದ ಅಭ್ಯರ್ಥಿಯಾಗಿ ಕಣಕ್ಕಿಳಿದವರು ರಾಷ್ಟ್ರಪತಿಯಾಗಿ ಆಯ್ಕೆಯಾಗುವುದು ನಿಶ್ಚಿತವಾಗಿದೆ.
ಭಾರತದ ನಾಗರಿಕರಾಗಿದ್ದು, 35 ವರ್ಷ ಅಥವಾ ಅದಕ್ಕಿಂತ ಮೇಲಿನವರು ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಬಹುದು. ಕೇಂದ್ರ ಅಥವಾ ರಾಜ್ಯ ಸರ್ಕಾರಗಳಲ್ಲಿ ಲಾಭದಾಯಕ ಹುದ್ದೆ ಹೊಂದಿರಬಾರದು.

ಆದರೆ ಹಾಲಿ ರಾಷ್ಟ್ರಪತಿ, ರಾಜ್ಯಪಾಲ, ಪ್ರಧಾನಿ ಸೇರಿ ಕೇಂದ್ರ ಸಚಿವರು, ಮುಖ್ಯಮಂತ್ರಿ ಸೇರಿ ರಾಜ್ಯ ಸಚಿವರಿಗೆ ಇದು ಅನ್ವಯವಾಗದು. ಈ ವ್ಯಕ್ತಿಗಳು ಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾಗಿ ರಾಷ್ಟ್ರಪತಿಯಾಗುವ ಮುನ್ನ ತಮ್ಮ ಹಿಂದಿನ ಹುದ್ದೆಗೆ ರಾಜೀನಾಮೆ ನೀಡಬೇಕು.

ನಾಮಪತ್ರ ಸಲ್ಲಿಸಲು 50 ರಾಷ್ಟ್ರಪತಿ ಚುನಾವಣೆಯ ಮತದಾರರು ಸೂಚಕರಾಗಿರಬೇಕು, 50 ಮತದಾರರು ಅನುಮೋದಕರಾಗಿರಬೇಕು. ಇಲ್ಲದಿದ್ದರೆ ಮತಪತ್ರದಲ್ಲಿ ಹೆಸರು ಇರುವುದಿಲ್ಲ. ನಾಮಪತ್ರ ಸಲ್ಲಿಕೆ ವೇಳೆ 15 ಸಾವಿರ ರು.ಗಳನ್ನು ಭದ್ರತಾ ಠೇವಣಿಯಾಗಿ ಕಟ್ಟಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ