ಬ್ಯಾಂಕಾಕ್: ಬರೋಬ್ಬರಿ 66 ವರ್ಷ ಥಾಯ್ಲೆಂಡ್ ರಾಣಿಯಾಗಿ ಮೆರೆದಿದ್ದ ರಾಜಮಾತೆ ಸಿರಿಕಿತ್ ಕಿತಿಯಾಕಾರ್ ಅವರು ಶುಕ್ರವಾರ ನಿಧನರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು.
1932 ರಲ್ಲಿ ಜನಿಸಿದ್ದ ರಾಣಿ ಸಿರಿಕಿತ್ ಅವರು ರಕ್ತದ ಸೋಂಕು ಹಾಗೂ ಇತರ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಅಕ್ಟೋಬರ್ 24 ರಂದು ಸಂಜೆ 9 ಗಂಟೆಗೆ ಅರಮನೆಯಲ್ಲಿ ನಿಧನರಾದರು.
ಸಿರಿಕಿತ್ ಥಾಯ್ಲೆಂಡ್ ರಾಣಿಯಾಗಿ 66 ವರ್ಷಗಳ ಅವಧಿಯಲ್ಲಿ ರಾಜಪ್ರಭುತ್ವ ಮತ್ತು ಜನರ ನಡುವಿನ ಕೊಂಡಿಯಾಗಿ ಕೆಲಸ ಮಾಡಿದರು. ಪ್ರಜೆಗಳನ್ನು ಮಕ್ಕಳಂತೆ ಕಂಡರು. ಅದಕ್ಕಾಗಿಯೇ ಥಾಯ್ಲೆಂಡ್‌ನಲ್ಲಿ 1976 ರಿಂದ ಅವರ ಹುಟ್ಟುಹಬ್ಬ ಆಗಸ್ಟ್ 12 ರ ಪ್ರಯುಕ್ತ ತಾಯಂದಿರ ದಿನವನ್ನಾಗಿ ಆಚರಿಸಲಾಗುತ್ತದೆ.
ಸಿರಿಕಿತ್ ಅವರು ಥಾಯ್ಲೆಂಡ್‌ನ ರಟ್ಟನಕೋಸಿನ್ ಸಾಮ್ಯಾಜ್ಯದ ಪ್ರಸ್ತುತ ಚಕ್ರಿ ರಾಜಮನೆತನದ 9ನೇ ರಾಜ ಭೂಮಿಬೋಲ್ ಅತುಲ್ಯದೇವ್ ಅವರನ್ನು 1950 ರಲ್ಲಿ ವರಿಸಿದ್ದರು. ಆ ಮೂಲಕ ಥಾಯ್ಲೆಂಡ್ ರಾಣಿ ಪಟ್ಟ ಏರಿದ್ದರು.
ರಟ್ಟನಕೋಸಿನ್ ಸಾಮ್ರಾಜ್ಯದ ಸಾಮಂತ ಅರಸರಾಗಿದ್ದ ಚಂತಾಭುರಿ ರಾಜಮನೆತನದ ಎರಡನೇ ರಾಜ ನಖ್ಖತ್ರ ಮಂಗಳ ಅವರ ಮೂರನೇ ಮಗಳೇ ರಾಣಿ ಸಿರಿಕಿತ್. ಸಿರಿಕಿತ್ ಅವರು ಪ್ಯಾರಿಸ್‌ನಲ್ಲಿ ಸಂಗೀತ ಕಲಿಯುವಾಗ ಅಪಘಾತವೊಂದರ ವೇಳೆ ಭೂಮಿಬೋಲ್ ಅತುಲ್ಯದೇವ್ ಅವರನ್ನು ಭೇಟಿಯಾಗಿ ಅವರ ಜೊತೆ ಪ್ರೇಮಾಂಕುರವಾಗಿತ್ತು.
2012ರಲ್ಲಿ ಸಿರಿಕಿತ್ ಅವರು ಪಾರ್ಶ್ವವಾಯುಗೆ ತುತ್ತಾಗಿದ್ದರು. ಅನಾರೋಗ್ಯದ ಕಾರಣದಿಂದ 2016ರಲ್ಲಿ ರಾಣಿ ಪದವಿ ತೊರೆದು ವಿಶ್ರಾಂತಿಯಲ್ಲಿದ್ದರು. ಅದೇ ವರ್ಷವೇ ರಾಜ ಭೂಮಿಬೋಲ್ ಅತುಲ್ಯದೇವ್ ತಮ್ಮ 88ನೇ ವಯಸ್ಸಿನಲ್ಲಿ ನಿಧನರಾದರು.