ಎಣ್ಣೆ ಪ್ರಿಯರಿಗೆ ಒಂದು ಸಿಹಿ ಸುದ್ದಿ : ಹರಿಯಾಣದಲ್ಲಿ ಹೊಸ ನಿಯಮ
ಸೋಮವಾರ, 15 ಮೇ 2023 (08:20 IST)
ಹರಿಯಾಣ ಮದ್ಯ ನೀತಿಯ ಈ ಹೊಸ ನಿಯಮವನ್ನು ಮೇ 9 ರಂದು ಕ್ಯಾಬಿನೆಟ್ ಸಭೆಯಲ್ಲಿ ನಿರ್ಧರಿಸಲಾಗಿದೆ. ಕನಿಷ್ಠ 5,000 ಉದ್ಯೋಗಿಗಳನ್ನು ಹೊಂದಿರುವ ಕಾರ್ಪೊರೇಟ್ ಕಚೇರಿಯಲ್ಲಿ ಉದ್ಯೋಗಿಗಳು ಬಿಯರ್ ಹಾಗೂ ವೈನ್ನಂತಹ ಪಾನೀಯಗಳನ್ನು ಸೇವಿಸಬಹುದು.
ಒಂದು ಲಕ್ಷ ಚದರ ಅಡಿ ವ್ಯಾಪ್ತಿಯ ಪ್ರದೇಶದಲ್ಲಿ ಹಾಗೂ ಒಂದೇ ಆವರಣದೊಳಗೆ ಮದ್ಯಪಾನಕ್ಕೆ ಅನುಮತಿ ನೀಡಲಾಗುತ್ತಿದೆ.
ಇದರರ್ಥ ನೀವು ದೊಡ್ಡ ಕಾರ್ಪೊರೇಟ್ ಕಚೇರಿಯಲ್ಲಿ ಉದ್ಯೋಗಿಯಾಗಿದ್ದರೆ ಕಚೇರಿಯ ಆವರಣದಲ್ಲಿ ಬಿಯರ್ ಅಥವಾ ವೈನ್ ಕುಡಿಯಬಹುದು. ಇವುಗಳನ್ನು ಕಚೇರಿಯಲ್ಲಿಯೇ ನೀಡಬೇಕು ಎಂದೇನಿಲ್ಲ. ನೀವು ಸ್ವಂತವಾಗಿಯೂ ಖರೀದಿಸಿ ಕಚೇರಿಯಲ್ಲಿ ಸೇವನೆ ಮಾಡಬಹುದು.
ಹರಿಯಾಣ ಮದ್ಯ ನೀತಿಯ ಪ್ರಕಾರ ಕಾರ್ಪೊರೇಟ್ ಕಚೇರಿಗಳು ಎಲ್-10ಎಫ್ ಮದ್ಯದ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸಬೇಕಾಗುತ್ತದೆ. ಇದು ಬಿಯರ್ ಮತ್ತು ವೈನ್ನಂತಹ ಕಡಿಮೆ ಆಲ್ಕೋಹಾಲ್ ಅಂಶದ ಪಾನೀಯಗಳನ್ನು ಸೇವಿಸಲು ಅನುವು ಮಾಡಿಕೊಡುತ್ತದೆ.
ಕ್ಯಾಂಟೀನ್ ಅಥವಾ ಉಪಾಹಾರ ಗೃಹದ ಕನಿಷ್ಠ ವಿಸ್ತೀರ್ಣವು 2,000 ಚದರ ಅಡಿಗಳಿಗಿಂತ ಕಡಿಮೆಯಿಲ್ಲದಿದ್ದರೆ ಕಾರ್ಪೊರೇಟ್ ಕಚೇರಿ ಪರವಾನಗಿ ಪಡೆಯಬಹುದು. ಪರವಾನಿಗೆ ಪಡೆಯುವ ಕಚೇರಿ 3 ಲಕ್ಷ ರೂ. ಭದ್ರತಾ ಮೊತ್ತವನ್ನು ಠೇವಣಿ ಇಡಬೇಕು.