ಸರ್ಕಾರಿ ಜಾಹೀರಾತು ಬೋರ್ಡಲ್ಲಿ ಜನಪ್ರತಿನಿಧಿಗಳ ಫೋಟೋ ಬೇಡ!

ಶನಿವಾರ, 7 ಆಗಸ್ಟ್ 2021 (09:17 IST)
ಬೆಂಗಳೂರು(ಆ.07): ಸಾರ್ವಜನಿಕ ಸ್ಥಳಗಳಲ್ಲಿ ಪ್ರಕಟಿಸುವ ಸರ್ಕಾರಿ ಜಾಹೀರಾತುಗಳಲ್ಲಿರುವ ಸ್ಥಳೀಯ ಜನಪ್ರತಿನಿಧಿಗಳ ಹೆಸರು ಮತ್ತು ಫೋಟೋಗಳನ್ನು ತೆರವುಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶನ ನೀಡಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.

ಈ ಕುರಿತು ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಎಚ್.ಎಂ. ವೆಂಕಟೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಎ.ಎಸ್. ಓಕ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿತು.
ಸಾರ್ವಜನಿಕ ಸ್ಥಳಗಳಲ್ಲಿ ಪ್ರಕಟಿಸುವ ಸರ್ಕಾರಿ ಜಾಹೀರಾತುಗಳಲ್ಲಿ ಜನಪ್ರತಿನಿಧಿಗಳ ಭಾವಚಿತ್ರ ಹಾಗೂ ಹೆಸರು ತೆರವು ಸಂಬಂಧ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಉಲ್ಲೇಖಿಸಿ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೆ ಅಗತ್ಯ ನಿರ್ದೇಶನ ನೀಡಿ ಆದೇಶ ಹೊರಡಿಸಬೇಕು. ಮುಂದಿನ ವಿಚಾರಣೆ ವೇಳೆಗೆ ಈ ಸಂಬಂಧ ಕ್ರಮ ಕೈಗೊಂಡಿರುವ ಬಗ್ಗೆ ವರದಿ ಸಲ್ಲಿಸಬೇಕು ಎಂದು ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಸೆ.17ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ವಿಚಾರಣೆ ವೇಳೆ ಸರ್ಕಾರಿ ವಕೀಲರು ವಾದ ಮಂಡಿಸಿ, ಸರ್ಕಾರಿ ಜಾಹೀರಾತುಗಳಲ್ಲಿನ ಜನಪ್ರತಿನಿಧಿಗಳ ಹೆಸರು ಮತ್ತು ಫೋಟೊ ತೆರವು ಸಂಬಂಧ ಕಳೆದ ಜುಲೈ 14ರಂದು ನಗರಾಭಿವೃದ್ಧಿ ಇಲಾಖೆ ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪ್ರಕರಣವೇನು?:
ರಸ್ತೆ, ಕುಡಿಯುವ ನೀರು ಘಟಕ, ಮೇಲ್ಸೇತುವೆ ಮತ್ತು ಒಳಚರಂಡಿ ನಿರ್ಮಾಣ ಸೇರಿ ಸರಕಾರದ ನಾನಾ ಯೋಜನೆಗಳ ಸಂಬಂಧ ಬಸ್ ನಿಲ್ದಾಣ, ಸಾರ್ವಜನಿಕ ಶೌಚಾಲಯ, ಆಟದ ಮೈದಾನ ಮತ್ತು ಉದ್ಯಾನವನಗಳಲ್ಲಿ ಜಾಹೀರಾತು ಅಳವಡಿಸಲಾಗಿದೆ. ಅವುಗಳಲ್ಲಿ ಸ್ಥಳೀಯ ಜನ ಪ್ರತಿನಿಧಿಗಳು ಮತ್ತು ರಾಜಕೀಯ ಮುಖಂಡರ ಹೆಸರು ಮತ್ತು ಫೋಟೋ ಪ್ರಕಟಿಸಲಾಗಿದೆ. ಆ ಮೂಲಕ ಅವರು ತಮ್ಮ ವೈಯಕ್ತಿಕ ಲಾಭಕ್ಕೆ ಜನರ ತೆರಿಗೆ ಹಣದಲ್ಲಿ ಕೈಗೊಂಡ ಸರ್ಕಾರಿ ಯೋಜನೆಗಳ ಹೆಸರು ಬಳಸಿಕೊಂಡು, ತಮ್ಮ ಸಾಧನೆ ಎನ್ನುವಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಸಾರ್ವಜನಿಕರ ಹಣದಲ್ಲಿ ಪ್ರಕಟಿಸಿದ ಜಾಹೀರಾತುಗಳಲ್ಲಿನ ಸ್ಥಳೀಯ ಜನಪ್ರತಿಧಿಗಳು ಮತ್ತು ರಾಜಕೀಯ ಮುಖಂಡರ ಹೆಸರು, ಫೋಟೊಗಳನ್ನು ತೆಗೆದುಹಾಕಲು ಸರ್ಕಾರ ಮತ್ತು ಬಿಬಿಎಂಪಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ