ಕೋವಿಶೀಲ್ಡ್-ಕೋವ್ಯಾಕ್ಸಿನ್ ಲಸಿಕೆ ಪಡೆದವರಿಗೆ ಮಹತ್ವದ ಸುದ್ದಿ
ಮಂಗಳವಾರ, 14 ಸೆಪ್ಟಂಬರ್ 2021 (13:19 IST)
ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ಮತ್ತುಷ್ಟು ಚುರುಕು ಪಡೆದಿದೆ. ಕೊರೊನಾ ಲಸಿಕೆ ನೀಡುವಲ್ಲಿ ಭಾರತ ದಾಖಲೆ ಬರೆದಿದೆ. ಆರೇ ದಿನಗಳಲ್ಲಿ 6 ಕೋಟಿಗೂ ಹೆಚ್ಚು ಲಸಿಕೆ ನೀಡಲಾಗಿದೆ.
ಆದ್ರೆ ಕೊರೊನಾ ಲಸಿಕೆ ಬಗ್ಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಕೋವಿಡ್ -19 ಲಸಿಕೆ ಕೋವಾಕ್ಸಿನ್ ಪಡೆದ ಜನರಲ್ಲಿ 2 ತಿಂಗಳ ನಂತರ ಪ್ರತಿಕಾಯಗಳು ಕಡಿಮೆಯಾಗಲು ಪ್ರಾರಂಭಿಸುತ್ತವೆ. ಕೋವಿಶೀಲ್ಡ್ ಡೋಸ್ ತೆಗೆದುಕೊಳ್ಳುವವರಲ್ಲಿ, ಪ್ರತಿಕಾಯಗಳ ಮಟ್ಟವು 3 ತಿಂಗಳ ನಂತರ ಕಡಿಮೆಯಾಗಲು ಆರಂಭವಾಗುತ್ತದೆ ಎಂಬ ಮಾಹಿತಿ ಹೊರ ಬಿದ್ದಿದೆ.
ಭುವನೇಶ್ವರದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ, ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರದಿಂದ ಅಧ್ಯಯನದ ವರದಿ ಸ್ವೀಕರಿಸಲಾಗಿದೆ. ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ ನ ಲಸಿಕೆ ಪಡೆದ ದೇಶದ 614 ಮಂದಿಯನ್ನು ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ. 308 ಮಂದಿ ಅಂದರೆ ಶೇಕಡಾ 50.2 ರಷ್ಟು ಜನರು ಕೋವಿಶೀಲ್ಡ್ ಲಸಿಕೆ ಪಡೆದಿದ್ದಾರೆ. 306 ಅಂದರೆ ಶೇಕಡಾ 49.8 ರಷ್ಟು ಮಂದಿ ಕೋವ್ಯಾಕ್ಸಿನ್ ಲಸಿಕೆ ಪಡೆದಿದ್ದಾರೆ.
ಲಸಿಕೆ ಪಡೆದ 533 ಆರೋಗ್ಯ ಕಾರ್ಯಕರ್ತರ ಪ್ರತಿಕಾಯ ಮಟ್ಟದಲ್ಲಿ ಗಮನಾರ್ಹ ಕುಸಿತ ಕಂಡು ಬಂದಿದೆ. ಕೋವ್ಯಾಕ್ಸಿನ್ ಪಡೆದವರಲ್ಲಿ ಎರಡು ತಿಂಗಳ ನಂತ್ರ ಪ್ರತಿಕಾಯದ ಮಟ್ಟ ಕಡಿಮೆಯಾಗಿದೆ. ಕೋವಿಶೀಲ್ಡ್ ತೆಗೆದುಕೊಳ್ಳುವವರಲ್ಲಿ 3 ತಿಂಗಳ ನಂತ್ರ ಪ್ರತಿಕಾಯ ಕಡಿಮೆಯಾಗಿದೆ ಎಂದು ಅಧ್ಯಯನದ ವರದಿಯಲ್ಲಿ ಹೇಳಲಾಗಿದೆ. ಬೋಸ್ಟರ್ ಡೋಸ್ ಬಗ್ಗೆ ಇನ್ನಷ್ಟು ಅಧ್ಯಯನ ನಡೆಯಬೇಕೆಂದ ಸಂಶೋಧಕರು, ಪ್ರತಿಕಾಯದ ಬಗ್ಗೆಯೂ ಸಂಶೋಧನೆ ನಡೆಯಬೇಕು ಎಂದಿದ್ದಾರೆ.