ಯುದ್ಧಭೂಮಿಯಾಗಿರುವ ಉಕ್ರೇನ್ನಲ್ಲಿ ಸಿಲುಕಿರುವ ಭಾರತದ ನೆರೆಹೊರೆಯ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಪ್ರಜೆಗಳನ್ನು ಸ್ಥಳಾಂತರ ಮಾಡಿ ರಕ್ಷಿಸಲು,
ಆ ರಾಷ್ಟ್ರಗಳಿಗೆ ನಾವು ಅಗತ್ಯ ಸಹಾಯ ಮಾಡಲಿದ್ದೇವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ಸಂಜೆ ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ ಹೇಳಿದ್ದಾಗಿ ವರದಿಯಾಗಿದೆ. ಅಷ್ಟೇ ಅಲ್ಲ, ಉಕ್ರೇನ್ನಿಂದ ಭಾರತಕ್ಕೆ ಮಾನವೀಯ ನೆರವು ನೀಡಲಾಗುವುದು ಎಂದೂ ಪ್ರಧಾನಿ ಹೇಳಿದ್ದಾರೆ.
ಅಷ್ಟೇ ಅಲ್ಲ, ಅವರು ಈಗಾಗಲೇ ರೊಮೇನಿಯಾದ ಪ್ರಧಾನಮಂತ್ರಿ ಎಚ್.ಇ.ನಿಕೋಲೇ-ಐಯೋನೆಲ್ ಸಿಯುಕಾ ಮತ್ತು ಸ್ಲೋವಕ್ ರಿಪಬ್ಲಿಕ್ ಪ್ರಧಾನಿ ಎಡ್ವರ್ಡ್ ಹೆಗೆರ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರ ಮಾಡಲು ಎಲ್ಲ ರೀತಿಯ ಅನುಕೂಲ ಮಾಡಿಕೊಟ್ಟಿದ್ದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.
ಉಕ್ರೇನ್ಗೆ ಮಾನವೀಯ ನೆರವು ಕಳಿಸುವ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಭಾಗ್ಚಿ, ಭಾರತದ ಉಕ್ರೇನ್ಗೆ ಔಷಧಗಳು ಮತ್ತು ಇನ್ನಿತರ ಅಗತ್ಯ ವಸ್ತುಗಳನ್ನು ಕಳಿಸಲಿದೆ. ಈ ಬಗ್ಗೆ ಭಾರತದಲ್ಲಿರುವ ಉಕ್ರೇನ್ ರಾಯಭಾರಿ ಇಗೋರ್ ಪೊಲಿಖಾ, ಕೇಂದ್ರ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಅವರ ಬಳಿ ಮನವಿ ಮಾಡಿದ್ದರು.
ಮಾನವೀಯ ನೆರವು ನೀಡುವುದಾಗಿ ಭಾರತ ಸರ್ಕಾರ ಹೇಳಿದ್ದರೂ ಕೂಡ ಯಾವ್ಯಾವ ಸಮಯದಲ್ಲಿ ಪೂರೈಕೆಯಾಗಲಿದೆ ಎಂಬ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ. ಉಕ್ರೇನ್ನಲ್ಲಿ ಅಗತ್ಯ ಹೆಚ್ಚಿರುವ ಕಾರಣ ತ್ವರಿತವಾಗಿ ಈ ಕಾರ್ಯ ನಡೆಯಲಿದೆ. ಉಕ್ರೇನ್ ತನ್ನ ಅಗತ್ಯಗಳ ಪಟ್ಟಿಯನ್ನು ಭಾರತಕ್ಕೆ ನೀಡಿದೆ ಎಂದೂ ಹೇಳಲಾಗಿದೆ.