ಕೇರಳ (ಅ 17 ) ; ದಕ್ಷಿಣ ಮತ್ತು ಮಧ್ಯ ಕೇರಳದಲ್ಲಿ ಭಾರೀ ಮಳೆಯಿಂದಾಗಿ ಶನಿವಾರ 6 ಜನ ಸಾವನ್ನಪ್ಪಿದ್ದಾರೆ ಮತ್ತು 12ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಮಳೆಯಿಂದಾಗಿ ಹಲವು ಭಾಗಗಳಲ್ಲಿ ಪ್ರವಾಹ ಮತ್ತು ಭೂಕುಸಿತ ಉಂಟಾಗಿದ್ದು, ರಕ್ಷಣಾ ಕಾರ್ಯಾಚರಣೆಗಳು ಮುಂದುವರೆದಿದೆ. ಈ ನಡುವೆ ಅಧಿಕ ಮಳೆಯಿಂದಾಗಿ ಕೇರಳ ದಕ್ಷಿಣ ಭಾಗದ ಎಲ್ಲಾ ಅಣೆಕಟ್ಟುಗಳು ತುಂಬಿದ್ದು, ಹೆಚ್ಚುವರಿ ನೀರನ್ನು ಹೊರಗೆ ಬಿಡಲಾಗುತ್ತಿದೆ. ಪರಿಣಾಮ ಗುಡ್ಡಗಾಡು ಪ್ರದೇಶಗಳು, ಹಳ್ಳಿ-ಗ್ರಾಮ ಮತ್ತು ಸಣ್ಣ ಪಟ್ಟಣಗಳು ದ್ವೀಪದಂತಾಗಿವೆ. ಅನೇಕ ಗ್ರಾಮಗಳು ಹೊರಗಿನ ಪ್ರಪಂಚದಿಂದ ಸಂಪೂರ್ಣ ಸಂಪರ್ಕ ಕಡಿತಗೊಂಡಿವೆ.
ಪ್ರವಾಹ ಪರಿಸ್ಥಿತಿಯನ್ನು ನಿಯಂತ್ರಿಸುವ ಸಲುವಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ ಮತ್ತು ರಾಜ್ಯದ ವಿಪತ್ತು ಪ್ರತಿಕ್ರಿಯೆ ಕಾರ್ಯವಿಧಾನವನ್ನು ಸಕ್ರಿಯಗೊಳಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾಧ್ಯಮಗಳ ಎದುರು ಮಾತನಾಡಿರುವ ಪಿಣರಾಯಿ ವಿಜಯನ್, " ರಾಜ್ಯದ ಪರಿಸ್ಥಿತಿ ಗಂಭೀರವಾಗಿದೆ. ಆದರೆ, ಇತ್ತೀಚಿನ ಹವಾಮಾನ ವರದಿಗಳು ಶೀಘ್ರದಲ್ಲೇ ಮಳೆ ನಿಲ್ಲಲಿದೆ ಎಂದು ಸೂಚಿಸಿದ್ದು ಪರಿಸ್ಥಿತಿಯು ಇನ್ನಷ್ಟು ಹದಗೆಡುವ ಲಕ್ಷಣಗಳನ್ನು ಗೋಚರಿಸುತ್ತಿಲ್ಲ. ಹೀಗಾಗಿ ಈ ಪ್ರವಾಹವನ್ನು ಶೀಘ್ರದಲ್ಲೇ ನಿಭಾಯಿಸಲಾಗುವುದು" ಎಂದು ತಿಳಿಸಿದ್ದಾರೆ.