ನವದೆಹಲಿ : ಕಳೆದ ಒಂದು ವಾರದಿಂದ ಸತತವಾಗಿ ಏರಿಕೆಯಾಗುತ್ತಿರುವ ಪೆಟ್ರೋಲ್-ಡೀಸೆಲ್ ದರದ ನಡುವೆ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯೂ ಏರಿಕೆಯಾಗಿರುವುದು ಯುಗಾದಿ ಹಬ್ಬಕ್ಕೂ ಮುನ್ನವೇ ಗ್ರಾಹಕರಿಗೆ ಶಾಕ್ ನೀಡಿದಂತಾಗಿದೆ.
ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಎಲ್ಪಿಜಿ ಸಿಲಿಂಡರ್ ಬೆಲೆಗಳನ್ನು ಮತ್ತೆ ಏರಿಕೆ ಮಾಡಿದೆ. ದೇಶದ ಅತಿದೊಡ್ಡ ತೈಲ ಕಂಪನಿಯಾದ ಇಂಡಿಯನ್ ಆಯಿಲ್ 19 ಕೆಜಿ ಸಿಲಿಂಡರ್ ಬೆಲೆಯನ್ನು ಬರೋಬ್ಬರಿ 250 ರೂ. ಗಳಷ್ಟು ಹೆಚ್ಚಿಸಿದೆ.
ಎಲ್ಪಿಜಿ ಪರಿಷ್ಕೃತ ದರವನ್ನು ಇಂದು ಬಿಡುಗಡೆ ಮಾಡಲಾಗಿದ್ದು, ಎಲ್ಪಿಜಿ ಸಿಲಿಂಡರ್ ಬೆಲೆ ಇದೇ ಮೊದಲಬಾರಿಗೆ 250 ರೂ. ಏರಿಕೆಯಾಗಿರುವುದು ಕಂಡುಬಂದಿದೆ.
2021ರ ಅಕ್ಟೋಬರ್ 6 ರಿಂದ ದೇಶೀಯ ಎಲ್ಪಿಜಿ ಸಿಲಿಂಡರ್ಗಳ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿರಲಿಲ್ಲ. ಕಳೆದ ಮಾರ್ಚ್ 22ರಂದು ಪೆಟ್ರೋಲ್, ಡೀಸೆಲ್ ದರದೊಂದಿಗೆ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯೂ 50 ರೂ. ಏರಿಕೆಯಾಗಿತ್ತು.
ಇದರಿಂದ ಎಲ್ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 949.50 ರೂ., ಕೋಲ್ಕತಾದಲ್ಲಿ 976 ರೂ., ಮುಂಬೈನಲ್ಲಿ 949.50 ರೂ., ಚೆನ್ನೈನಲ್ಲಿ 965.50 ರೂ.ಗೆ ಮಾರಾಟವಾಗುತ್ತಿತ್ತು.
ಇದೀಗ 14 ಕೆ.ಜಿ. ಸಿಲಿಂಡರ್ ಬೆಲೆ ಯಥಾಸ್ಥಿತಿಯಲ್ಲಿದ್ದರೂ 19 ಕೆಜಿ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಲಾಗಿದೆ. ಬೆಂಗಳೂರಿನಲ್ಲಿ 14 ಕೆ.ಜಿ. ಎಲ್ಪಿಜಿ ಸಿಲಿಂಡರ್ಗೆ 954.50 ರೂ. ಇದ್ದು, 19 ಕೆಜಿ ಎಲ್ಪಿಜಿ ಸಿಲಿಂಡರ್ ದರ 1685.50 ರೂ.ಗೆ ಮಾರಾಟ ಮಾಡಲಾಗುತ್ತಿದೆ.