ಪೊಲೀಸರನ್ನೇ ಯಾಮಾರಿಸಲು ಹೋಗಿ ಸಿಕ್ಕಿ ಹಾಕಿಕೊಂಡ ಮಡಿಕೇರಿ ದಂಪತಿಗಳು

ಮಂಗಳವಾರ, 28 ಆಗಸ್ಟ್ 2018 (07:16 IST)
ಕೊಡಗು : ಮಡಿಕೇರಿ ತಾಲೂಕಿನ  ಕಾಲೂರು ಗ್ರಾಮದಲ್ಲಿ ಸಂಭವಿಸಿದ ಮಹಾಮಳೆಗೆ ಭೂಕುಸಿತ ಉಂಟಾಗಿದ್ದು, ಇದನ್ನೇ ಆಧಾರವಾಗಿಟ್ಟುಕೊಂಡ ಮಡಿಕೇರಿಯ ದಂಪತಿಗಳು ಹಣದ ಆಸೆಗೆ ಮಗ ನಾಪತ್ತೆಯಾಗಿದ್ದಾನೆಂದು ದೂರು ದಾಖಲಿಸಿ ಇದೀಗ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ.


ಜಿಲ್ಲೆಯಲ್ಲಿ ಸುರಿದ ಮಹಾಮಳೆಯಿಂದ ಕಾಲೂರು ಭಾಗದಲ್ಲೂ ಬೆಟ್ಟ ಕುಸಿದು ಗ್ರಾಮಸ್ಥರು ಜೀವಭಯದಿಂದ ಊರು ತೊರೆದಿದ್ದರು. ಈ ಸಂದರ್ಭ ಸೋಮಶೇಖರ್, ಸುಮಾ ದಂಪತಿ ಭೂ ಕುಸಿತದಿಂದ ತನ್ನ 7 ವರ್ಷದ ಮಗ ಗಗನ್ ಗಣಪತಿ ಕಣ್ಣ ಮುಂದೆಯೇ ಮಣ್ಣಿನಡಿ ಸಿಲುಕಿಕೊಂಡ ಎಂದು ಪ್ರಕರಣ ದಾಖಲಿಸಿ ದುಃಖದಿಂದಯೇ  ಮಡಿಕೇರಿಯ ಮೈತ್ರಿ ಹಾಲ್‌ನ ನಿರಾಶ್ರಿತರ ಶಿಬಿರ ಸೇರಿಕೊಂಡಿದ್ದರು.


ನಾಪತ್ತೆ ಪ್ರಕರಣವನ್ನು ದಾಖಲಿಸಿಕೊಂಡ ಮಡಿಕೇರಿ ಗ್ರಾಮಾಂತರ ಪೊಲೀಸರು ಕಳೆದ ನಾಲ್ಕು ದಿನಗಳಿಂದ ಭೂಕುಸಿತದ ಸ್ಥಳದಲ್ಲಿ ಬಾಲಕನ ಪತ್ತೆಗಾಗಿ ನಿರಂತರ ಶೋಧ ಕಾರ್ಯ ಕೈಗೊಂಡಿದ್ದರು. ಆದರೆ ಬಾಲಕ ಪತ್ತೆಯಾಗಿರಲಿಲ್ಲ. ನಂತರ ದಂಪತಿಗಳ ಬಳಿ ಬಾಲಕ ಮಣ್ಣಿನಡಿ ಸಿಲುಕಿರುವ ಸ್ಥಳ ತೋರಿಸುವಂತೆ ಕೇಳಿದಾಗ ಗೊಂದಲಕ್ಕೆ ಸಿಲುಕಿದ ದಂಪತಿಗಳ ಕಂಡು ಸಂಶಯಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಮಗು ನಾಪತ್ತೆಯಾಗಿರುವುದು ಸುಳ್ಳು ಎಂಬುದು ತಿಳಿದುಬಂದಿದೆ.


ಸೋಮಶೇಖರ್ ಮತ್ತು ಸುಮಾ ಇಬ್ಬರದ್ದು ಕೂಡಾ ಎರಡನೇ ವಿವಾಹವಾಗಿದ್ದು, ಇಬ್ಬರೂ ತಮ್ಮ ಮೊದಲನೇ ಮಕ್ಕಳನ್ನು ತೊರೆದಿದ್ದಾರೆ. ನಾಪತ್ತೆಯಾಗಿದ್ದಾನೆಂದು ಹೇಳಲಾಗಿದ್ದ ಬಾಲಕ, ಸುಮಾ ಅವರ ತಾಯಿಯ ಮನೆ ತಿತಿಮತಿಯಲ್ಲಿ ಸುರಕ್ಷಿತವಾಗಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ದಂಪತಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ದೊರೆಯುತ್ತದೆ ಎನ್ನುವ ಕಾರಣಕ್ಕಾಗಿ ಈ ಕೆಲಸ ಮಾಡಿರುವುದಾಗಿ ದಂಪತಿ ತಪ್ಪೊಪ್ಪಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ