ಕಾಂಗ್ರೆಸ್ ಬಿಟ್ಟ ಶಾಸಕ ಮಾಲೀಕಯ್ಯ ಗುತ್ತೇದಾರ್ ಪಯಣ ಎತ್ತ?
ಗುರುವಾರ, 29 ಮಾರ್ಚ್ 2018 (09:40 IST)
ಬೆಂಗಳೂರು: ಹಲವು ದಿನಗಳ ಊಹಾಪೋಹಗಳಿಗೆ ತೆರೆ ಎಳೆದ ಶಾಸಕ ಮಾಲೀಕಯ್ಯ ಗುತ್ತೇದಾರ್, ಕಾಂಗ್ರೆಸ್ ಪಕ್ಷಕ್ಕೆ ಕೊನೆಗೂ ಗುಡ್ ಬೈ ಹೇಳಿದ್ದು, ಇಂದು ರಾಜೀನಾಮೆ ಸಲ್ಲಿಸಲಿದ್ದಾರೆ.
ಇಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಿರುವ ಮಾಲೀಕಯ್ಯ ಗುತ್ತೇದಾರ್, ಬಳಿಕ ಸ್ಪೀಕರ್ ಬಳಿ ತೆರಳಿ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ. ಸಿಎಂ ಸಿದ್ದರಾಮಯ್ಯ ಮೇಲೆ ತಮಗೆ ಅಪಾರ ಗೌರವವಿದೆ. ಆದರೆ ಕಾಂಗ್ರೆಸ್ ನಲ್ಲಿ ಸತತವಾಗಿ ಗೆದ್ದರೂ 3 ಬಾರಿ ಮಂತ್ರಿ ಸ್ಥಾನ ಕೈ ತಪ್ಪಿದ ಬೇಸರದಲ್ಲಿ ರಾಜೀನಾಮೆ ನೀಡುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಕಾಂಗ್ರೆಸ್ ನ ಕೆಲವು ನಾಯಕರ ಮೇಲೆ ತಮಗೆ ಅಸಮಾಧಾನವಿದೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ತ್ಯಜಿಸಲಿರುವ ಗುತ್ತೇದಾರ್ ಯಾವ ಪಕ್ಷಕ್ಕೆ ಸೇರಬಹುದು ಎಂಬ ಕುತೂಹಲ ಮೂಡಿದೆ. ಬಿಜೆಪಿ ಸೇರಬಹುದು ಎಂದು ಹಿಂದೆ ಊಹಾಪೋಹಗಳು ಎದ್ದಿದ್ದವು. ಹಾಗಿದ್ದರೂ ತಾವು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮತ್ತು ಜೆಡಿಎಸ್ ವರಿಷ್ಠ ದೇವೇಗೌಡ ಅವರೊಂದಿಗೂ ಚರ್ಚಿಸುವುದಾಗಿ ಅವರು ಹೇಳಿದ್ದಾರೆ. ಈ ಮೂಲಕ ತಾವು ಯಾವ ಪಕ್ಷ ಸೇರುವುದು ಎಂಬ ವಿಷಯವನ್ನು ಕುತೂಹಲದಲ್ಲಿರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ