ನವದೆಹಲಿ : ರಷ್ಯಾ ಮತ್ತು ಉಕ್ರೇನ್ ಸಂಘರ್ಷದ ನಡುವೆ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರಿಸಲು ನಾಲ್ವರು ಕೇಂದ್ರ ಸಚಿವರು ಉಕ್ರೇನ್ನ ನೆರೆಯ ದೇಶಗಳಿಗೆ ಹಾರಲಿದ್ದಾರೆ.
ಉಕ್ರೇನ್ ಬಿಕ್ಕಟ್ಟಿನಿಂದ ದೇಶವನ್ನು ತೊರೆಯಲು ಪ್ರಯತ್ನಿಸುತ್ತಿರುವ ಭಾರತೀಯರ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ಉನ್ನತ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಸಚಿವರಾದ ಹರ್ದೀಪ್ ಪುರಿ, ಜ್ಯೋತಿರಾದಿತ್ಯ ಸಿಂಧಿಯಾ, ಕಿರಣ್ ರಿಜಿಜು ಮತ್ತು ವಿ.ಕೆ. ಸಿಂಗ್ ಅವರು ಭಾರತದ ವಿಶೇಷ ರಾಯಭಾರಿಗಳಾಗಿ ಉಕ್ರೇನ್ ಸುತ್ತಮುತ್ತಲಿನ ದೇಶಗಳಿಗೆ ತೆರಳಿ ಭಾರತೀಯರು ಸ್ಥಳಾಂತರಗೊಳ್ಳಲು ಸಹಾಯ ಮಾಡಲಿದ್ದಾರೆ.
ಮೋದಿ ಅವರು ನಡೆಸುತ್ತಿರುವ ಎರಡನೇ ಸಭೆ ಇದಾಗಿದ್ದು, ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಗೊಳಿಸಲು ಮೊದಲ ಆದ್ಯತೆ ನೀಡಲಾಗಿದೆ ಎಂದು ಮೋದಿ ತಿಳಿಸಿದ್ದಾರೆ. ಅಲ್ಲದೇ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್, ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಸೇರಿದಂತೆ ಹಲವು ಸಚಿವರು ಉಪಸ್ಥಿತರಿದ್ದರು.