ಸಂಸತ್ತಿನ ‘ಮುಂಗಾರು ಸಮರ’!?

ಸೋಮವಾರ, 19 ಜುಲೈ 2021 (09:59 IST)
ನವದೆಹಲಿ(ಜು.19): ಸಂಸತ್ತಿನ ಮುಂಗಾರು ಅಧಿವೇಶನ ಸೋಮವಾರದಿಂದ ಆರಂಭವಾಗಲಿದೆ. ಮೊದಲ ದಿನವೇ ಅಧಿವೇಶನವು ಕಾವೇರುವ ಸಾಧ್ಯತೆ ಇದ್ದು, ಪೆಟ್ರೋಲ್-ಡೀಸೆಲ್ ದರ ಏರಿಕೆ ಹಾಗೂ ಕೋವಿಡ್ ನಿರ್ವಹಣೆ ವೈಫಲ್ಯ- ಮೊದಲಾದ ವಿಷಯಗಳನ್ನು ಇಟ್ಟುಕೊಂಡು ಮೋದಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಸಜ್ಜಾಗಿವೆ.


* ಪೆಟ್ರೋಲ್ ದರ, ಕೋವಿಡ್ ವಿಷಯ ಪ್ರಮುಖ ಪ್ರಸ್ತಾಪ
* ಮೋದಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳ ಸಿದ್ಧತೆ
* 17 ವಿಧೇಯಕ ಮಂಡಿಸಲು ಸರ್ಕಾರ ಸಜ್ಜು
* ಸುಗಮ ಕಲಾಪಕ್ಕೆ ಸಹಕಾರ ನೀಡಿ: ಸರ್ವಪಕ್ಷಗಳಿಗೆ ಮೋದಿ ಮನವಿ
* ಆಗಸ್ಟ್ 13ರವರೆಗೆ ನಡೆಯಲಿದೆ ಅಧಿವೇಶನ

ಇದೇ ವೇಳೆ, ಸರ್ಕಾರವು 17 ವಿಧೇಯಕಗಳನ್ನು ಮಂಡಿಸಲು ಸಿದ್ಧತೆ ನಡೆಸಿದೆ. ಇದರಲ್ಲಿ 3 ಸುಗ್ರೀವಾಜ್ಞೆಗಳು ಕೂಡ ಸೇರಿವೆ. ಅಧಿವೇಶನ ಆರಂಭದ 42 ದಿನದೊಳಗೆ ಸುಗ್ರೀವಾಜ್ಞೆಗಳು ಕಾಯ್ದೆ ರೂಪದಲ್ಲಿ ಬದಲಾಗದಿದ್ದರೆ ಅವು ತಮ್ಮ ಅಸ್ತಿತ್ವ ಕಳೆದುಕೊಳ್ಳಲಿವೆ.
"
ಶಸ್ತಾ್ರಸ್ತ್ರ ಉತ್ಪಾದಿಸುವ ಕಾರ್ಖಾನೆಗಳ ನೌಕರರು ಮುಷ್ಕರ ನಡೆಸುವಂತಿಲ್ಲ ಎಂದು ನಿರ್ಬಂಧ ವಿಧಿಸುವ ಸುಗ್ರೀವಾಜ್ಞೆಯು ಇವುಗಳಲ್ಲಿ ಮಹತ್ವವಾದುದು. ದಿಲ್ಲಿ ವಾಯುಗುಣಮಟ್ಟಕಾಯುವ ಸುಗ್ರೀವಾಜ್ಞೆ ಕೂಡ ಇದರಲ್ಲಿ ಸೇರಿದೆ.
ಆದರೆ ಆಗಸ್ಟ್ 13ರಂದು ಮುಗಿಯಲಿರುವ ಈ ಅಧಿವೇಶನದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ 100 ರು. ದಾಟಿರುವುದು ಪ್ರಮುಖ ವಿಷಯವಾಗುವ ಸಾಧ್ಯತೆ ಇದೆ. ಇದನ್ನು ಪ್ರಮುಖವಾಗಿ ಪ್ರಸ್ತಾಪಿಸಿ ಸರ್ಕಾರದಿಂದ ಉತ್ತರ ಬಯಸಲು ಕಾಂಗ್ರೆಸ್ ಆದಿಯಾಗಿ ವಿವಿಧ ಪ್ರತಿಪಕ್ಷಗಳು ತೀರ್ಮಾನಿಸಿವೆ.
ಇನ್ನು ಕೋವಿಡ್ 2ನೇ ಅಲೆ ವೇಳೆ ಅಪಾರ ಸಾವು ನೋವು ಸಂಭವಿಸಿದ್ದು, ಇದಕ್ಕೆ ಸರ್ಕಾರದ ಆರೋಗ್ಯ ವ್ಯವಸ್ಥೆ ವೈಫಲ್ಯವೇ ಕಾರಣ ಎಂಬುದು ಪ್ರತಿಪಕ್ಷಗಳ ಮುಖ್ಯ ಆರೋಪ. ಇದು ಪ್ರಮುಖ ಚರ್ಚಾ ವಿಷಯ ಆಗುವುದು ನಿಶ್ಚಿತ.
ಇನ್ನು ಪಶ್ಚಿಮ ಬಂಗಾಳದಲ್ಲಿನ ಟಿಎಂಸಿ-ಬಿಜೆಪಿ ರಾಜಕೀಯ ಸಂಘರ್ಷ ಕೂಡ ಕೋಲಾಹಲ ಎಬ್ಬಿಸುವ ಸಾಧ್ಯತೆ ಇದೆ. ರಾಜ್ಯಗಳ ಆಡಳಿತದಲ್ಲಿ ಕೇಂದ್ರ ಹಸ್ತಕ್ಷೇಪ ಮಾಡುತ್ತತಿದೆ ಎಂಬುದು ತೃಣಮೂಲ ಕಾಂಗ್ರೆಸ್ ಪ್ರಮುಖ ಆರೋಪ.
ಸಹಕಾರ ನೀಡಿ- ಪ್ರಧಾನಿ ಮನವಿ:
ಈ ನಡುವೆ, ಸುಗಮ ಸಂಸತ್ ಕಲಾಪಕ್ಕೋಸ್ಕರ ಭಾನುವಾರ ಸರ್ವಪಕ್ಷ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ಪ್ರತಿಪಕ್ಷಗಳ ರಚನಾತ್ಮಕ ಸಲಹೆಗಳನ್ನು ಸ್ವೀಕರಿಸಲು ಸರ್ಕಾರ ಮುಕ್ತ ಮನಸ್ಸು ಹೊಂದಿದೆ. ಕಲಾಪವನ್ನು ಸುಗಮವಾಗಿ ನಡೆಯಲು ಅವಕಾಶ ನೀಡಬೇಕು’ ಎಂದು ಮನವಿ ಮಾಡಿದರು.
ಹೊಸ ಸಚಿವರ ಪರಿಚಯ:
ಮೋದಿ ಮಂತ್ರಿಮಂಡಲದ ಸದಸ್ಯರಾಗಿ 43 ಸಚಿವರು ಪ್ರಮಾಣವಚನ ಸ್ವೀಕರಿಸಿದ್ದು, ಅವರ ಪರಿಚಯ ಕೂಡ ಅಧಿವೇಶನದ ಆರಂಭದಲ್ಲಿ ನಡೆಯಲಿದೆ.
ಕೋವಿಡ್ ನಿಯಮ ಪಾಲನೆ:
ಕೋವಿಡ್ ನಿಯಮಗಳಿಗೆ ಅನುಸಾರವಾಗಿ ಕಲಾಪ ನಡೆಯಲಿದೆ. 444 ಲೋಕಸಭೆ ಹಾಗೂ 218 ರಾಜ್ಯಸಭೆ ಸದಸ್ಯರು ಕನಿಷ್ಠ ಪಕ್ಷ 1 ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಲಸಿಕೆ ಹಾಕಿಸಿಕೊಳ್ಳದವರಿಗೆ ಆರ್ಟಿಪಿಸಿಆರ್ ಟೆಸ್ಟ್ ವ್ಯವಸ್ಥೆ ಮಾಡಲಾಗಿದೆ.
ಕಳೆದ ಅಧಿವೇಶನದ ಮೊದಲಾರ್ಧವು ಕೋವಿಡ್ ನಿಯಮಕ್ಕೆ ಅನುಸಾರವಾಗಿ 2 ಅವಧಿಯಲ್ಲಿ ವಿಭಜನೆ ಆಗಿತ್ತು. ಬೆಳಗ್ಗೆ ರಾಜ್ಯಸಭೆ ಹಾಗೂ ಮಧ್ಯಾಹ್ನ ಲೋಕಸಭೆ ಕಲಾಪ ನಡೆದಿದ್ದವು. ಆದರೆ ಉತ್ತರಾರ್ಧದಲ್ಲಿ ದಿನವಿಡೀ ರಾಜ್ಯಸಭೆ ಹಾಗೂ ಲೋಕಸಭೆ ಕಲಾಪ ನಡೆದಿದ್ದವು. ಈಗ ಕೂಡ ಇಡೀ ದಿನ ಪ್ರತ್ಯೇಕ ಕಲಾಪ ನಡೆಯಲಿವೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ