ಜಗತ್ತಿನಾದ್ಯಂತ ಕೋವಿಡ್ ಕೇಸು, ಸಾವು ಮತ್ತೆ ಹೆಚ್ಚಳ: ಭಾರತಕ್ಕೆ ಎಚ್ಚರಿಕೆಯ ಗಂಟೆ!
ಶುಕ್ರವಾರ, 16 ಜುಲೈ 2021 (11:54 IST)
ವಾಷಿಂಗ್ಟನ್(ಜು.16): ಜಗತ್ತಿನಾದ್ಯಂತ ಕೊರೋನಾ ಕೇಸು ಹಾಗೂ ಸಾವಿನ ಸಂಖ್ಯೆ ಮತ್ತೆ ಏರಿಕೆಯಾಗುತ್ತಿದ್ದು, 3ನೇ ಅಲೆ ತೀವ್ರಗೊಳ್ಳುವ ಭಾರಿ ಆತಂಕ ಎದುರಾಗಿದೆ. ಸತತ ಒಂಭತ್ತು ವಾರಗಳ ಕಾಲ ಜಗತ್ತಿನಲ್ಲಿ ಒಟ್ಟಾರೆ ನಿತ್ಯ ವರದಿಯಾಗುವ ಕೋವಿಡ್ ಕೇಸು ಹಾಗೂ ಸಾವಿನ ಸಂಖ್ಯೆ ಇಳಿಕೆಯಾಗುತ್ತಿತ್ತು. ಆದರೆ, ಕಳೆದ ವಾರ ಅದು ಏರಿಕೆಯಾಗಿದೆ. ಇನ್ನೂ 2ನೇ ಅಲೆಯ ಅಂತ್ಯದಲ್ಲಿರುವ ಭಾರತಕ್ಕೆ ಇದು ಎಚ್ಚರಿಕೆಯ ಗಂಟೆಯಾಗಿದೆ.
* ಸತತ 9 ವಾರಗಳ ಇಳಿಕೆಯ ನಂತರ ಕಳೆದ ವಾರ ಏರಿಕೆ
* ಜಗತ್ತಿನಾದ್ಯಂತ ಕೋವಿಡ್ ಕೇಸು, ಸಾವು ಮತ್ತೆ ಹೆಚ್ಚಳ
* ರಷ್ಯಾ, ಬ್ರಿಟನ್, ಇಂಡೋನೇಷ್ಯಾ, ಮ್ಯಾನ್ಮಾರ್ ಕಂಗಾಲು
* 2ನೇ ಅಲೆಯ ಅಂತ್ಯದಲ್ಲಿರುವ ಭಾರತಕ್ಕೆ ಎಚ್ಚರಿಕೆಯ ಗಂಟೆ
ಕಳೆದ ವಾರ ಜಗತ್ತಿನಲ್ಲಿ ಕೋವಿಡ್ನಿಂದ 55,000 ಮಂದಿ ಸಾವನ್ನಪ್ಪಿದ್ದಾರೆ. ಇದು ಅದಕ್ಕೂ ಹಿಂದಿನ ವಾರಕ್ಕಿಂತ ಶೇ.3ರಷ್ಟುಅಧಿಕವಾಗಿದೆ. ಇನ್ನು, ಕಳೆದ ವಾರ ಸುಮಾರು 10 ಲಕ್ಷ ಕೋವಿಡ್ ಕೇಸುಗಳು ಜಗತ್ತಿನಲ್ಲಿ ವರದಿಯಾಗಿವೆ. ಇದು ಅದಕ್ಕಿಂತ ಹಿಂದಿನ ವಾರದ ಶೇ.10ರಷ್ಟುಹೆಚ್ಚು. ಹೀಗಾಗಿ ಜಗತ್ತಿನಲ್ಲಿ ಕೊರೋನಾದ 3ನೇ ಅಲೆ ಪ್ರಾರಂಭವಾಗಿದೆ ಎಂದು ಕೆಲ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ನಿರೀಕ್ಷಿತ ಪ್ರಮಾಣದಲ್ಲಿ ಲಸಿಕೆ ನೀಡದೆ ಇರುವುದು, ಮಾಸ್ಕ್ ನಿಯಮಗಳನ್ನು ಸಡಿಲಗೊಳಿಸಿರುವುದು, ಜನರ ನಿರ್ಲಕ್ಷ್ಯ ಹಾಗೂ ಹೆಚ್ಚು ವೇಗವಾಗಿ ಹರಡುತ್ತಿರುವ ಡೆಲ್ಟಾರೂಪಾಂತರಿಯಿಂದಾಗಿ ಕೊರೋನಾ ಕೇಸುಗಳ ಸಂಖ್ಯೆ ಜಾಸ್ತಿಯಾಗುತ್ತಿದೆ ಎಂದು ಹೇಳಲಾಗಿದೆ.
ಯಾವ ದೇಶದಲ್ಲಿ ಏನಾಗಿದೆ?
1.ಅರ್ಜೆಂಟೀನಾ: ಒಟ್ಟು ಕೋವಿಡ್ ಸಾವಿನ ಸಂಖ್ಯೆ 1 ಲಕ್ಷ ದಾಟಿದೆ.
2. ರಷ್ಯಾ: ಈ ವಾರ ನಿತ್ಯ ಕೇಸುಗಳ ಸಂಖ್ಯೆ ಸಾರ್ವಕಾಲಿಕ ದಾಖಲೆ ಬರೆದಿದೆ.
3. ಬೆಲ್ಜಿಯಂ: ಕಳೆದ ವಾರ ಡೆಲ್ಟಾಕೇಸುಗಳ ಸಂಖ್ಯೆ ದುಪ್ಪಟ್ಟಾಗಿದೆ.
4. ಬ್ರಿಟನ್: ಕಳೆದ ಆರು ತಿಂಗಳಲ್ಲಿ ಮೊದಲ ಬಾರಿ ಒಂದೇ ದಿನ 40,000 ಕೇಸು ಪತ್ತೆ.
5. ಮ್ಯಾನ್ಮಾರ್: ಸ್ಮಶಾನಗಳಲ್ಲಿ ಹಗಲು-ರಾತ್ರಿ ಶವ ಹೂಳುವ ಕಾರ್ಯ ನಡೆಯುತ್ತಿದೆ.
6. ಇಂಡೋನೇಷ್ಯಾ: ನಿತ್ಯ 1000 ಸಾವು, 55 ಸಾವಿರ ಕೇಸು ಪತ್ತೆ. ಶವ ಹೂಳಲು ಜನಸಾಮಾನ್ಯರು ಕೂಡ ಗುಂಡಿ ತೋಡುವ ಕೆಲಸಕ್ಕೆ ಕೈಜೋಡಿಸಿದ್ದಾರೆ.
7. ಅಮೆರಿಕ: ಕಳೆದ 2 ವಾರಗಳಲ್ಲಿ ನಿತ್ಯ ವರದಿಯಾಗುವ ಕೇಸ್ ದುಪ್ಪಟ್ಟಾಗಿ 24,000ಕ್ಕೆ ಏರಿಕೆಯಾಗಿದೆ.
8. ಜಪಾನ್: ಒಲಿಂಪಿಕ್ಸ್ ಆರಂಭದ ಹೊಸ್ತಿಲಿನಲ್ಲಿ ಕೇಸುಗಳ ಸಂಖ್ಯೆ ಏರಿಕೆ, ಆಸ್ಪತ್ರೆಗಳು ಬಹುತೇಕ ಭರ್ತಿ.
9. ಆಸ್ಪ್ರೇಲಿಯಾ: ಸಿಡ್ನಿಯಲ್ಲಿ ಈ ತಿಂಗಳಾಂತ್ಯದವರೆಗೂ ಲಾಕ್ಡೌನ್ ಅನಿರೀಕ್ಷಿತ ಮುಂದುವರಿಕೆ.
10. ದಕ್ಷಿಣ ಕೊರಿಯಾ: ರಾಜಧಾನಿ ಸೋಲ್ನಲ್ಲಿ ಅತ್ಯಂತ ಕಠಿಣ ಸಾಮಾಜಿಕ ಅಂತರ ನಿಯಮ ಜಾರಿ.
11. ಸ್ಪೇನ್: ಬಾರ್ಸಿಲೋನಾ ಸೇರಿದಂತೆ ಹಲವು ನಗರಗಳಲ್ಲಿ ರಾತ್ರಿ ಕಫ್ಮ್ರ್ಯ ಜಾರಿ.
12. ಇಟಲಿ: ವಿದೇಶಕ್ಕೆ ಹೋಗಿ ಬಂದವರಿಗೆ ಕ್ವಾರಂಟೈನ್ ಮಾಡುವ ನಿಯಮ ಜಾರಿ ಸಾಧ್ಯತೆ.