ಇಸ್ಲಾಮಾಬಾದ್ : ಪಾಕಿಸ್ತಾನದ ಭೀಕರ ಪ್ರವಾಹದ ಪರಿಣಾಮವಾಗಿ ದೇಶದಲ್ಲಿ ಸುಮಾರು 1,300 ಜನರು ಸಾವನ್ನಪ್ಪಿದ್ದಾರೆ.
ಕಳೆದ 24 ಗಂಟೆಯಲ್ಲಿ 29 ಜನರು ಸಾವನ್ನಪ್ಪಿದ್ದು, ಇನ್ನೂ ಕೂಡಾ ಪರಿಹಾರ ಕಾರ್ಯಾಚರಣೆ ಮುಂದುವರೆದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ದೇಶದ ದೊಡ್ಡ ಭಾಗಗಳೇ ಪ್ರವಾಹದಿಂದ ಮುಳುಗಡೆಯಾಗಿದೆ. ಮುಖ್ಯವಾಗಿ ಸಿಂಧ್ನಲ್ಲಿನ ಭೀಕರ ಪ್ರವಾಹಕ್ಕೆ ಕನಿಷ್ಠ 180 ಜನರು ಸಾವನ್ನಪ್ಪಿದ್ದಾರೆ. ಬಳಿಕ ಖೈಬರ್ ಪಖ್ತುಂಕ್ವಾದಲ್ಲಿ 138 ಹಾಗೂ ಬಲೂಚಿಸ್ತಾನದಲ್ಲಿ 125 ಜನರು ಸಾವನ್ನಪ್ಪಿದ್ದಾರೆ.
ಸುಮಾರು 5 ಲಕ್ಷಕ್ಕೂ ಹೆಚ್ಚು ಜನರು ಮನೆಗಳನ್ನು ಕಳೆದುಕೊಂಡು ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಪ್ರವಾಹದಿಂದಾಗಿ ಸುಮಾರು 14,68,010 ಮನೆಗಳಿಗೆ ಹಾನಿಯಾಗಿದೆ. 7,36,450 ಜಾನುವಾರುಗಳು ಸಾವನ್ನಪ್ಪಿವೆ.
ಹಾನಿಯ ಆರಂಭಿಕ ಅಂದಾಜನ್ನು 10 ಶತಕೋಟಿ ಡಾಲರ್(ಸುಮಾರು 79 ಸಾವಿರ ಕೋಟಿ ರೂ.) ಎನ್ನಲಾಗಿದೆ.