ಬಿಸಿಲಿನ ತಾಪಮಾನಕ್ಕೆ ಬಲಿಯಾಗುತ್ತಿರುವ ಜನತೆ!

ಬುಧವಾರ, 4 ಮೇ 2022 (07:27 IST)
ನವದೆಹಲಿ : ಮಹಾರಾಷ್ಟ್ರದಲ್ಲಿ ಬಿಸಿಯ ಬೇಗೆ ಹೆಚ್ಚಾಗಿದ್ದು ಕಳೆದ ಮಾರ್ಚ್ ತಿಂಗಳಿನಿಂದ ಇಲ್ಲಿಯವರೆಗೆ ಕನಿಷ್ಠ 25 ಮಂದಿ ಬಲಿಯಾಗಿದ್ದು, 100ಕ್ಕೂ ಹೆಚ್ಚು ಮಂದಿ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
 
ಮಹಾರಾಷ್ಟ್ರದ ಹಲವು ಭಾಗದಲ್ಲಿ 46 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಕಳೆದ ಮಾರ್ಚ್ ನಿಂದ ಇದುವರೆಗೆ ಬಿಸಿಲಿನ ತಾಪಕ್ಕೆ 25 ಮಂದಿ ಮೃತಪಟ್ಟಿದ್ದಾರೆ. ಇದು 2016 ರಿಂದ ಈವರೆಗೆ ವರದಿಯಾದ ಅತಿ ಹೆಚ್ಚು ಸಾವಾಗಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.

ಕಳೆದ ಏಪ್ರಿಲ್ ತಿಂಗಳಲ್ಲಿ 122 ವರ್ಷಗಳ ಬಳಿಕ ಭಾರತ ದೇಶದಲ್ಲಿ ಅಧಿಕ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ದೇಶದಾದ್ಯಂತ ಸರಾಸರಿ ಗರಿಷ್ಠ ತಾಪಮಾನವು 33.1 ಡಿಗ್ರಿ ಸೆಲ್ಸಿಯಸ್ಗೆ ಏರಿದೆ, ಇದು ಸಾಮಾನ್ಯಕ್ಕಿಂತ ಸುಮಾರು 1.86 ಡಿಗ್ರಿ ಸೆಲ್ಸಿಯಸ್ನಷ್ಟು ಹೆಚ್ಚಾಗಿದೆ.

ಭಾರತದ ಉತ್ತರ, ಪಶ್ಚಿಮ ಮತ್ತು ಪೂರ್ವದ ಹಲವು ಭಾಗಗಳಲ್ಲಿ ಕಳೆದ ತಿಂಗಳು ತಾಪಮಾನವು 40 ಡಿಗ್ರಿ ಸೆಲ್ಸಿ ದಾಟಿತ್ತು. ಉತ್ತರ ಕರ್ನಾಟಕ ಭಾಗದ ಕೆಲ ಜಿಲ್ಲೆಗಳಲ್ಲಿ ಈಗಲೂ ಬಿಸಿಲಿನ ಗರಿಷ್ಠ ತಾಪಮಾನ 41 ಡಿಗ್ರಿ ಸೆಲ್ಸಿಯಸ್ ಇದೆ.

ಪೂರ್ವ ರಾಜ್ಯ ಒಡಿಶಾದಲ್ಲಿ, ಏಪ್ರಿಲ್ 25 ರಂದು 64 ವರ್ಷದ ವ್ಯಕ್ತಿಯೊಬ್ಬರು ಬಿಸಿಲಿನ ತಾಪದಿಂದ ಮೃತಪಟ್ಟಿದ್ದಾರೆ. ನೂರಾರು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆಯೂ ಸಹ ಓಡಿಶಾದ ಸುವರ್ಣಪುರ ಜಿಲ್ಲೆಯಲ್ಲಿ 43.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಫ್ಯಾನ್, ಏರ್ ಕೂಲರ್ಗಳೂ ಸಹ ಕೆಲಸ ಮಾಡದಂತಾಗಿದ್ದು, ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ವರದಿ ಹೇಳಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ