ನವದೆಹಲಿ : ರಷ್ಯಾ ಇದೀಗ ಭಾರತದ 2ನೇ ಅತಿ ದೊಡ್ಡ ಕಚ್ಚಾ ತೈಲ ಪೂರೈಕೆದಾರನಾಗಿ ಹೊರಹೊಮ್ಮಿದೆ. ಕಳೆದ ತಿಂಗಳು ಭಾರತ ರಷ್ಯಾದಿಂದ ಆಮದು ಮಾಡಿದ ತೈಲ ಶೇ.18.5 ರಷ್ಟು ಏರಿಕೆಯಾಗಿದೆ ಎಂದು ವರದಿಯಾಗಿದೆ.
ಭಾರತ ಜೂನ್ನಲ್ಲಿ ರಷ್ಯಾದಿಂದ ದಿನಕ್ಕೆ 9,33,000 ಬ್ಯಾರೆಲ್ನಷ್ಟು ತೈಲವನ್ನು ಆಮದು ಮಾಡಿಕೊಂಡಿತ್ತು. ಬಳಿಕ ಕಚ್ಚಾ ತೈಲದ ಆಮದು 2 ತಿಂಗಳು ಕುಸಿದ ಬಳಿಕ ಸೆಪ್ಟೆಂಬರ್ನಲ್ಲಿ ದಿನಕ್ಕೆ 8,79,000 ಬ್ಯಾರೆಲ್ ತೈಲವನ್ನು ಆಮದು ಮಾಡಿಕೊಂಡಿದೆ.
ಈ ಮೂಲಕ ಇದೀಗ ಭಾರತಕ್ಕೆ ಸೌದಿ ಅರೇಬಿಯಾದ ಬಳಿಕ ರಷ್ಯಾ ಅತಿ ಹೆಚ್ಚು ತೈಲ ರಫ್ತು ಮಾಡುವ ದೇಶ ಎನಿಸಿಕೊಂಡಿದೆ. ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸುವುದಕ್ಕೂ ಮೊದಲು ಭಾರತಕ್ಕೆ ಕೇವಲ ಶೇ.1 ರಷ್ಟು ತೈಲವನ್ನು ಪೂರೈಕೆ ಮಾಡುತ್ತಿತ್ತು.
ಯುದ್ಧ ಪ್ರಾರಂಭವಾಗುತ್ತಿದ್ದಂತೆಯೇ ಕಚ್ಚಾ ತೈಲವನ್ನು ಭಾರೀ ರಿಯಾಯಿತಿಯಲ್ಲಿ ನೀಡಲು ಆರಂಭಿಸಿದ ರಷ್ಯಾದಿಂದ ಭಾರತ ಭಾರೀ ಪ್ರಮಾಣದಲ್ಲಿ ಆಮದನ್ನು ಹೆಚ್ಚಿಸಿದೆ.