ಕೋವಿಡ್ ಪತ್ತೆ ಮಾಡಲು ಲಾಲಾರಸ ಪರೀಕ್ಷೆ ಹೆಚ್ಚು ಪ್ರಭಾವಶಾಲಿ: ಅಧ್ಯಯನ ವರದಿ

ಸೋಮವಾರ, 20 ಸೆಪ್ಟಂಬರ್ 2021 (10:45 IST)
ಕೋವಿಡ್ ಸೋಂಕು ಇರುವುದನ್ನು ಪತ್ತೆ ಮಾಡಲು ಮೂಗಿನ ಹೊಳ್ಳೆ ಅಥವಾ ಗಂಟಲಿನ ಸ್ವಾಬ್ಗಳ ಪರೀಕ್ಷೆಗಳಿಗಿಂತ ಲಾಲಾರಸದ ಸ್ಯಾಂಪಲ್ ಪರೀಕ್ಷೆ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಅಮೆರಿಕದ ಆಹಾರ ಮತ್ತು ಮದ್ದು ಆಡಳಿತ (ಎಫ್ಡಿಎ) ತಿಳಿಸಿದೆ.

ರಾಕ್ಫೆಲ್ಲರ್ ವಿವಿ ನಡೆಸಿದ ಅಧ್ಯಯನವೊಂದರಲ್ಲಿ ಲಾಲಾ ರಸದ 'ಡ್ರುಲ್' ಪರೀಕ್ಷೆ ಹಾಗೂ ಸಾಂಪ್ರದಾಯಿಕ ಸ್ವಾಬ್ ಪರೀಕ್ಷೆಗೆ ಒಳಪಟ್ಟ 162 ಮಂದಿಯನ್ನು ನೇರಾನೇರ ವಿಶ್ಲೇಷಿಸಲಾಗಿದೆ. ಸ್ವಾಬ್ ಪಾಸಿಟಿವ್ ಎಂದು ಪತ್ತೆ ಮಾಡಿದ ಎಲ್ಲರನ್ನೂ ಡ್ರುಲ್ ಪರೀಕ್ಷೆ ಪಾಸಿಟಿವ್ ಎಂದು ಕಂಡುಕೊಂಡಿದ್ದು, ಸ್ವಾಬ್ನಿಂದ ಪತ್ತೆ ಮಾಡಲಾಗದ ನಾಲ್ಕು ಪ್ರಕರಣಗಳನ್ನು ಸಹ ಡ್ರುಲ್ ಶೋಧಿಸಿದೆ.
"ನಾವು ಅಭಿವೃದ್ಧಿಪಡಿಸಿದ ಪರೀಕ್ಷೆ ಸೂಕ್ಷ್ಮ ಸಂವೇದಿ ಹಾಗೂ ಸುರಕ್ಷಿತ ಎಂದು ಈ ಸಂಶೋಧನೆ ಸಾಬೀತು ಪಡಿಸುತ್ತದೆ. ಇದು ಅಗ್ಗವಾಗಿದ್ದು, ರಾಕ್ಫೆಲ್ಲರ್ ಸಮುದಾಯದೊಳಗೆ ಅತ್ಯುತ್ತಮ ಸರ್ವೇಕ್ಷಣೆ ನಡೆಸಲು ಸಾಧ್ಯವಾಗಿದೆ. ಸಾಂಕ್ರಾಮಿಕ ಇನ್ನಷ್ಟು ವ್ಯಾಪಕವಾಗುತ್ತಲೇ ಇನ್ನಷ್ಟು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲು ಇದು ಅನುವಾಗಲಿದೆ," ಎಂದು ವಿಶ್ವವಿದ್ಯಾಲಯದ ಮಾಲಿಕ್ಯುಲರ್ ನ್ಯೂರೋ-ಆಂಕಾಲಜಿ ವಿಭಾಗದ ಮುಖ್ಯಸ್ಥ ಪ್ರೊ. ರಾಬರ್ಟ್ ಬಿ ಡಾರ್ನಲ್ ತಿಳಿಸಿದ್ದಾರೆ.
ಸದ್ಯಕ್ಕೆ ಪ್ರತಿಯೊಂದು ಪರೀಕ್ಷೆಗೂ $100 ಖರ್ಚಾಗುತ್ತಿದ್ದು, ಲಾಲಾರಸದ ಪರೀಕ್ಷೆಯನ್ನು $2ಗೆಲ್ಲಾ ಮಾಡಬಹುದಾಗಿದೆ ಎಂದು 'ಪ್ಲೋಸ್ ಒನ್' ನಿಯತಕಾಲಿಕೆಯಲ್ಲಿ ಪ್ರಕಟವಾದ ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ