ವೈರಲ್ ವಿಡಿಯೋ ವಿರುದ್ಧ ಸೈಬರ್ ಪೊಲೀಸರಿಗೆ ದೂರಿತ್ತ ಡಿವಿಎಸ್

ಸೋಮವಾರ, 20 ಸೆಪ್ಟಂಬರ್ 2021 (08:01 IST)
ಬೆಂಗಳೂರು, ಸೆ 20 :  ಕೇಂದ್ರದ ಮಾಜಿ ಸಚಿವ ಡಿ. ವಿ ಸದಾನಂದ ಗೌಡ ಅವರು ಸೈಬರ್ ಕ್ರೈಂ ಪೊಲೀಸರಿಗೆ ಇಂದು ದೂರು ನೀಡಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋಗೂ ನನಗೂ ಯಾವುದೇ ಸಂಬಂಧವಿಲ್ಲ, ಈ ವಿಡಿಯೋದಲ್ಲಿರುವುದು ನಾನಲ್ಲ ಎಂದು ಟ್ವೀಟ್ ಮಾಡಿ ಸ್ಪಷ್ಟಪಡಿಸಿದ್ದಾರೆ.

''ಸಾಮಾಜಿಕ ಜಾಲ ತಾಣಗಳು, ವಾಟ್ಸಾಪ್ ಗಳಲ್ಲಿ ಹಂಚಿಕೆಯಾಗುತ್ತಿರುವ ವಿಡಿಯೋ ಕಾಲ್ ವಿಡಿಯೋದಲ್ಲಿರುವ ವ್ಯಕ್ತಿಯ ಮುಖ ನನ್ನ ಮುಖದಂತೆ ಕಾಣುವಂತೆ ಮಾರ್ಫ್ ಮಾಡಲಾಗಿದೆ, ನನ್ನ ಹೆಸರು ಕೆಡಿಸಲು ವಿರೋಧಿಗಳು ಮಾಡಿರುವ ಕುತಂತ್ರ ಇದು, ಈ ವಿಡಿಯೋದಲ್ಲಿರುವುದು ನಾನಲ್ಲ, ನನ್ನ ವಿರೋಧಿಗಳು ನನ್ನ ನಿಷ್ಪಕ್ಷಪಾತ ವ್ಯಕ್ತಿತ್ವವನ್ನು ಹಾಳುಮಾಡಲು ಇದನ್ನು ನಿರ್ಮಿಸಿದ್ದಾರೆ ಎಂದು ತಿಳಿಸಲು ಇಚ್ಚಿಸುತ್ತೇನೆ.'' ಎಂದು ಬಿಜೆಪಿ ಮುಖಂಡ ಸದಾನಂದ ಗೌಡ ಹೇಳಿದ್ದಾರೆ.
ಈ ವಿಡಿಯೋ ಕುರಿತು ಹಾಗೂ ವಿಡಿಯೋ ಹಂಚಿಕೆ ಮಾಡುತ್ತಿರುವವರ ವಿರುದ್ಧ ಬೆಂಗಳೂರು ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸರಿಗೆ ಸದಾನಂದ ಗೌಡರ ಪರವಾಗಿ ದೂರು ನೀಡಲಾಗಿದೆ.
ಇಂಥ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲ ತಾಣಗಳಾದ ಫೇಸ್ ಬುಕ್, ಟ್ವಿಟ್ಟರ್, ಕೂ ಅಲ್ಲದೆ, ವಾಟ್ಸಾಪ್, ಟೆಲಿಗ್ರಾಮ್ ಮುಂತಾದೆಡೆ ಹಂಚಿಕೊಳ್ಳುವುದು, ಅಪ್ಲೋಡ್, ಫಾರ್ವಡ್ ಮಾಡುವುದು ಶಿಕ್ಷಾರ್ಹವಾಗಿದೆ. ಇಂಥ ಕೃತ್ಯ ಎಸಗಿದವರ ಬಗ್ಗೆ ನನಗೆ ತಿಳಿಸಿ, ನನ್ನ ವಿರುದ್ಧ ಮಾನಹಾನಿ ಲೇಖನ ಪ್ರಕಟಿಸುವುದಕ್ಕೂ ನ್ಯಾಯಾಲಯದಿಂದ ತಡೆಯಾಜ್ಞೆ ಇದೆ ಎಂದು ಸದಾನಂದ ಗೌಡರು ತಿಳಿಸಿದ್ದಾರೆ.
ನನಗೆ ನಂಬಿಕೆ ಇದೆ, ಅಪರಾಧಿಗಳನ್ನು ಶೀಘ್ರವೇ ಬಂಧಿಸಲಾಗುವುದು. ಅಲ್ಲದೇ, ನಾನು ನ್ಯಾಯಾಲಯದ ತಡೆಯಾಜ್ಞೆಯ ಪ್ರಕಾರ, ವಿಷಯವನ್ನು ಫಾರ್ವರ್ಡ್ ಮಾಡುವ/ಅಪ್ಲೋಡ್ ಮಾಡುವ ಯಾರಾದರೂ ಕಾನೂನಿನ ಸಂಬಂಧಿತ ವಿಭಾಗಗಳ ಪ್ರಕಾರ ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ಸದಾನಂದ ಗೌಡರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ