ಬೆಂಗಳೂರು: ಪ್ರತ್ಯೇಕ ರಾಜ್ಯ ಹೋರಾಟದ ಕಾವು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸಿಎಂ ಕುಮಾರಸ್ವಾಮಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಶಾಸಕರು ಗರಂ ಆಗಿದ್ದಾರೆ.
ಸಿಎಂ ಕುಮಾರಸ್ವಾಮಿ ಉತ್ತರ ಕರ್ನಾಟಕದ ಬಗ್ಗೆ ನಿರ್ಲಕ್ಷ್ಯದ ಹೇಳಿಕೆ ನೀಡಿರುವುದೇ ಈ ಹೋರಾಟಕ್ಕೆ ಕಾರಣವಾಗಿದೆ ಎಂದು ಸಿದ್ದರಾಮಯ್ಯ ಆಪ್ತರು ಕೆಂಡ ಕಾರಿದ್ದಾರೆ.
ಉತ್ತರ ಕರ್ನಾಟಕ ರೈತರ ಬಗ್ಗೆ ಸಿಎಂ ಕುಮಾರಸ್ವಾಮಿ ಹಗುರವಾಗಿ ಮಾತನಾಡಿದ್ದು ತಪ್ಪು. ಅವರ ಹೇಳಿಕೆ ಹಿಂಪಡೆಯಬೇಕು. ಉತ್ತರ ಕರ್ನಾಟಕ ಭಾಗದವರಿಗೆ ಸಚಿವ ಸ್ಥಾನ ಕೊಟ್ಟು ಆ ಭಾಗಕ್ಕೆ ಆದ ಅನ್ಯಾಯ ಸರಿಪಡಿಸಬೇಕು ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಆಗ್ರಹಿಸಿದ್ದಾರೆ.
ಇನ್ನೊಂದೆಡೆ ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ್, ಸಿಎಂ ಕುಮಾರಸ್ವಾಮಿ ಸಾಲಮನ್ನಾ ವಿಚಾರದಲ್ಲಿ ಕೊಪ್ಪಳ ರೈತರ ಬಗ್ಗೆ ಮಾತನಾಡಿದ ರೀತಿ ಸರಿಯಿಲ್ಲ. ಈ ಬಗ್ಗೆ ಸಿದ್ದರಾಮಯ್ಯಗೆ ದೂರು ಕೊಡ್ತೀನಿ. ನಮಗೆ ಉತ್ತರ ಕರ್ನಾಟಕದ ಜನ ಮತ ಹಾಕಿ ಗೆಲ್ಲಿಸಿದ್ದಾರೆ. ನಾವು ಕುಮಾರಸ್ವಾಮಿಗೆ ಬೆಂಬಲ ಕೊಟ್ಟಿದ್ದೇವೆ. ಅಂದರೆ ಪರೋಕ್ಷವಾಗಿ ಇಲ್ಲಿನ ಜನ ಕುಮಾರಸ್ವಾಮಿಗೆ ಓಟು ಹಾಕಿದಂತೆ ಅಲ್ಲವೇ? ಎಂದು ಹಿಟ್ನಾಳ್ ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.