ಮಹಿಳಾ ಶಿಕ್ಷಣಕ್ಕೆ ತಾಲಿಬಾನ್ ಅಸ್ತು

ಮಂಗಳವಾರ, 10 ಜನವರಿ 2023 (11:47 IST)
ಕಾಬೂಲ್ : ಮಹಿಳೆಯರಿಗೆ ಬುರ್ಕಾ ನಿಷೇಧ ಹೇರಿದ್ದ ಬೆನ್ನಲ್ಲೇ ಮಹಿಳಾ ಶಿಕ್ಷಣ ನಿಷೇಧಿಸಿದ್ದ ತಾಲಿಬಾನ್ ಮತ್ತೆ ಮಹಿಳಾ ಶಿಕ್ಷಣ ಮುಂದುವರಿಸುವ ನಿರ್ಧಾರ ಕೈಗೊಂಡಿದೆ. 1 ರಿಂದ 6ನೇ ತರಗತಿವರೆಗಿನ ಅಥವಾ ಅದಕ್ಕಿಂತಲೂ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳಿಗೆ ಶಾಲೆಗಳಲ್ಲಿ ತಮ್ಮ ಅಧ್ಯಯನ ಮುಂದುವರಿಸಲು ಅವಕಾಶ ನೀಡಿದೆ.
 
ತಾಲಿಬಾನ್ ಶಿಕ್ಷಣ ಸಚಿವಾಲಯವು 6ನೇ ತರಗತಿಯೊಳಗಿನ ಹೆಣ್ಣುಮಕ್ಕಳಿಗೆ ಬಾಲಕಿಯರಿಗೆ ಶಾಲೆಗಳು ಮತ್ತು ಶೈಕ್ಷಣಿಕ ಕೇಂದ್ರಗಳನ್ನು ತೆರೆಯುವಂತೆ ಅಧಿಕಾರಿಗಳಿಗೆ ಪತ್ರಾದೇಶ ಹೊರಡಿಸಿದೆ.

ಕೆಲ ದಿನಗಳ ಹಿಂದೆ ತಾಲಿಬಾನ್ ಮಹಿಳಾ ಶಿಕ್ಷಣಕ್ಕೆ ಸಂಪೂರ್ಣ ನಿಷೇಧ ಹೇರಿತ್ತು. ಇದನ್ನು ವಿರೋಧಿಸಿ ಮಹಿಳೆಯರು ಬೀದಿಗಿಳಿದು ಹೋರಾಟ ನಡೆಸಿದ್ದರು. ಈ ಬೆನ್ನಲ್ಲೇ ಪದವಿ ಕಾಲೇಜಿನ ಪುರುಷ ವಿದ್ಯಾರ್ಥಿಗಳು ತರಗತಿಗಳನ್ನ ಬಹಿಷ್ಕರಿಸಿದ್ದರು. ಮಹಿಳಾ ವಿದ್ಯಾರ್ಥಿಗಳು ಹಾಜರಾಗುವವರೆಗೂ ನಾವೂ ಹಾಜರಾಗುವುದಿಲ್ಲ ಎಂದು ಪ್ರತಿಭಟನೆಗೆ ಮುಂದಾಗಿದ್ದರು.

ಉ7 ಗುಂಪಿನ ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಯುನೈಟೆಡ್ ಕಿಂಗ್ಡಮ್, ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪಿಯನ್ ಯೂನಿಯನ್ ವಿದೇಶಾಂಗ ಸಚಿವರು ನಿಷೇಧವನ್ನು ಹಿಂತೆಗೆದುಕೊಳ್ಳುವಂತೆ ತಾಲಿಬಾನ್ಗೆ ಒತ್ತಾಯಿಸಿದ್ದರು.

ಟರ್ಕಿ, ಕತಾರ್ ಮತ್ತು ಪಾಕಿಸ್ತಾನ ಸೇರಿದಂತೆ ಮುಸ್ಲಿಂ ರಾಷ್ಟ್ರಗಳೂ ಅಸಮಾಧಾನ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ತಮ್ಮ ಶಿಕ್ಷಣ ನೀತಿಯನ್ನು ಮರುಪರಿಶೀಲಿಸಿದ ತಾಲಿಬಾನ್ ಸಚಿವಾಲಯ 6ನೇ ತರಗತಿಯೊಳಗಿನ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅಸ್ತು ಎಂದಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ