ತನಿಖೆ ನಡೆಸಲು ಸರ್ಕಾರಕ್ಕೆ ಅಧಿಕಾರವಿಲ್ಲ ಎಂದ ಚುನಾವಣಾ ಆಯೋಗ
ಮಂಗಳವಾರ, 22 ನವೆಂಬರ್ 2022 (09:37 IST)
ಬೆಂಗಳೂರು : ವೋಟರ್ ಐಡಿ ಹಗರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಯಾವುದೇ ತನಿಖೆಗೆ ಆದೇಶ ಮಾಡುವಂತಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.
ಚಿಲುಮೆ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಾದ ಬೆನ್ನಲ್ಲೇ ಚುನಾವಣಾ ಆಯೋಗ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ಏನೇ ಅಕ್ರಮ ನಡೆದರೂ ಚುನಾವಣಾ ಆಯೋಗಕ್ಕೆ ಮಾತ್ರ ತನಿಖೆ ನಡೆಸುವ ಅಧಿಕಾರ ಇದೆ ಎಂದು ಹೇಳಿದೆ.
ಭಾರತದ ಚುನಾವಣಾ ಆಯೋಗದ ನಿರ್ದೇಶನದೊಂದಿಗೆ ಎಲ್ಲಾ ಚಟುವಟಿಕೆಗಳನ್ನು ನೇರವಾಗಿ ಅಧೀಕ್ಷಕರ ಅಡಿಯಲ್ಲಿ ನಡೆಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ಯಾವುದೇ ಪಾತ್ರವನ್ನು ಹೊಂದಿಲ್ಲ.
ಮತದಾರರ ಪಟ್ಟಿಗಳ ನಿರ್ವಹಣೆ, ಚುನಾವಣೆಗಳನ್ನು ನಡೆಸುವುದು, ಚುನಾವಣಾ ವಿಷಯಗಳಲ್ಲಿ ಅಕ್ರಮ ಆರೋಪ ಬಂದಾಗ ತನಿಖೆ ನಡೆಸಲು ಚುನಾವಣಾ ಆಯೋಗಕ್ಕೆ ಮಾತ್ರ ಅಧಿಕಾರವಿದೆ ಹೊರತು ರಾಜ್ಯ ಸರ್ಕಾರಕ್ಕಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.