ಬೆಂಗಳೂರು : ಕೊರೊನಾ 4ನೇ ಅಲೆಯ ಭೀತಿ ರಾಜ್ಯದಲ್ಲಿ ಪ್ರಾರಂಭವಾಗಿದೆ. ನಿಧಾನಗತಿಯಲ್ಲಿ ಕೊರೊನಾ ಕೇಸ್ ಹೆಚ್ಚಳ ಆಗುತ್ತಿದೆ.
ಕೊರೊನಾ 4ನೇ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಸರ್ಕಾರ, ನಾಲ್ಕನೇ ಅಲೆ ತಡೆಗೆ ತಾಂತ್ರಿಕ ಸಲಹಾ ಸಮಿತಿಯಿಂದ ವರದಿ ನೀಡುವಂತೆ ಸೂಚನೆ ನೀಡಿದೆ.
ನಿನ್ನೆಯಷ್ಟೆ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆದಿತ್ತು. ಸಭೆಯಲ್ಲಿ ಅನಗತ್ಯವಾಗಿ ಯಾವುದೇ ನಿರ್ಬಂಧ ಹಾಕಬೇಡಿ ಅಂತ ಪ್ರಧಾನಿಗಳು ಸೂಚನೆ ನೀಡಿದ್ದರು. ಟೆಸ್ಟಿಂಗ್, ಟ್ರೇಸಿಂಗ್, ಟ್ರಿಟ್ಮೆಂಟ್ ಸೂತ್ರ ಅನುಷ್ಠಾನ ಮಾಡಿ ಅಂತ ಸಲಹೆ ಕೊಟ್ಟಿದ್ದರು.
ಪ್ರಧಾನಿಗಳ ಸಲಹೆ ಮೇರೆಗೆ ರಾಜ್ಯ ಸರ್ಕಾರವೂ ಕೂಡಾ ಯಾವುದೇ ಟಫ್ ರೂಲ್ಸ್ ಜಾರಿ ಮಾಡದೇ ಕೆಲವೊಂದು ನಿರ್ಧಾರಗಳನ್ನ ಮಾತ್ರ ಘೋಷಣೆ ಮಾಡಿದೆ. ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಕೆಲ ಪ್ರಾರಂಭಿಕ ನಿಯಮಗಳನ್ನು ಸರ್ಕಾರ ಜಾರಿ ಮಾಡಿದೆ. ಅದನ್ನ ಹೊರತುಪಡಿಸಿ ಕೆಲವು ಕ್ರಮಗಳನ್ನು ಸರ್ಕಾರ ಜಾರಿ ಮಾಡಿದೆ.
ರಾಜ್ಯದಲ್ಲಿ ಜೂನ್ ವೇಳೆಗೆ 4ನೇ ಅಲೆ ಬರುವ ನಿರೀಕ್ಷೆ ಇದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಸಿದ್ದವಾಗಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ವರದಿ ನೀಡುವಂತೆ ತಾಂತ್ರಿಕ ಸಲಹಾ ಸಮಿತಿಗೆ ಸರ್ಕಾರ ಸೂಚನೆ ನೀಡಿದೆ.
ರಾಜ್ಯಕ್ಕೆ 4ನೇ ಅಲೆ ವೈಜ್ಞಾನಿಕವಾಗಿ ಯಾವಾಗ ಪ್ರಾರಂಭ ಆಗಬಹುದು. ನಾಲ್ಕನೇ ಅಲೆ ಅಂತ್ಯ ಯಾವಾಗ ಆಗಬಹುದು? ಅನ್ನೋ ಮಾಹಿತಿ ನೀಡಲು ತಜ್ಞರಿಗೆ ಮನವಿ ಮಾಡಲಾಗಿದೆ. 4ನೇ ಅಲೆಯ ತೀವ್ರತೆ ಹೇಗೆ ಇರಲಿದೆ? ಬೇರೆ ಬೇರೆ ದೇಶಗಳು, ರಾಜ್ಯಗಳ ವರದಿ ಪರಾಮರ್ಶಿಸಿ ವರದಿ ನೀಡುವಂತೆ ಸರ್ಕಾರ ಸೂಚನೆ ನೀಡಿದೆ.